ಚನ್ನರಾಯಪಟ್ಟಣ: ಓದುಗರಲ್ಲಿ ಕ್ರಿಯಾಶೀಲತೆ ಉಂಟು ಮಾಡುವ, ದೈನಂದಿನ ವಿಚಾರಗಳನ್ನು ಕಟ್ಟಿಕೊಡುವ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಹೆಚ್ಚು ಜ್ಞಾನ ಪಡೆಯಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ತಿಳಿಸಿದರು.
ಪಟ್ಟಣದ ಮೇಗಲಕೇರಿ ಪ್ರೌಢಶಾಲೆಯಲ್ಲಿ ಚನ್ನರಾಯಪಟ್ಟಣ ರೋಟರಿ ಕ್ಲಬ್ ಮಿಷನ್ ವತಿಯಿಂದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯ ‘ವಿದ್ಯಾರ್ಥಿ ಮಿತ್ರ’ ಸಂಚಿಕೆಯನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿ, ದೂರದರ್ಶನ, ಸಾಮಾಜಿಕ ಜಾಲತಾಣಗಳು ನಮಗೆ ಮಾಹಿತಿ ನೀಡಬಹುದಷ್ಟೆ. ಆದರೆ, ಪತ್ರಿಕೆಗಳನ್ನು ಓದುವುದರಿಂದ ಪ್ರಪಂಚದ ಆಗು-ಹೋಗುಗಳು ನಮ್ಮ ಸ್ಮತಿ ಪಟಲದಲ್ಲಿ ಮುದ್ರೆ ಹಾಕಿದಂತೆ ಉಳಿಯುತ್ತವೆ ಎಂದು ಹೇಳಿದರು.
ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ಶಿಕ್ಷಣ, ಕ್ರೀಡೆ, ಆರ್ಥಿಕ ವ್ಯವಹಾರ, ದೇಶ-ವಿದೇಶಗಳ ಸಮಗ್ರ ಮಾಹಿತಿ, ಸಂಪಾದಕೀಯ, ವಿಮರ್ಶೆ ಲಭ್ಯವಿರುತ್ತದೆ. ಇನ್ನು ಸ್ಥಳೀಯ ಸಮಸ್ಯೆಗಳು, ಸಾಧನೆ-ಸಾಧಕರು, ವಿಜ್ಞಾನ-ಪರಿಸರಕ್ಕೆ ಪೂರಕವಾದ ವಿಶೇಷ ಲೇಖನಗಳನ್ನು ಗಮನಿಸಬಹುದು. ವಿದ್ಯಾರ್ಥಿ ದಿಸೆಯಿಂದಲೇ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಲ್ಲಿ ಭಾಷೆಯ ಮೇಲಿನ ಹಿಡಿತದೊಂದಿಗೆ ವಿದ್ಯಾರ್ಥಿಯ ಜ್ಞಾನಭಂಡಾರವೂ ವೃದ್ಧಿಸಿಕೊಳ್ಳಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಅದಕ್ಕಾಗಿ ಶಾಲಾ ಕಾಲೇಜುಗಳಿಂದಲೇ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ. ವಿಜಯವಾಣಿ ಹೊರ ತರುತ್ತಿರುವ ವಿದ್ಯಾರ್ಥಿ ಮಿತ್ರ ಸಂಚಿಕೆಯು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪೂರಕವಾದ ಮಾಹಿತಿ ಹೊಂದಿದೆ. ಸಂಚಿಕೆಯನ್ನು ಎಲ್ಲರೂ ತಪ್ಪದೇ ಓದಬೇಕು ಎಂದರು.
ಯಾವುದೇ ಶಾಲೆ ಅಭಿವೃದ್ಧಿ ಹೊಂದಬೇಕಾದರೆ ಪಾಲಕರ ಸಹಕಾರ ಅಗತ್ಯ. ಪಾಲಕರು ಎಲ್ಲ ಜವಾಬ್ದಾರಿ ಶಿಕ್ಷಕರ ಮೇಲೆ ಹೊರಿಸದೆ ಹೊಣೆಗಾರಿಕೆಯನ್ನು ಅರಿತು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಕರ ಜೊತೆ ಕೈ ಜೋಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಅವರನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ರೋಟರಿ ಸಂಸ್ಥೆಯು ವಿಶ್ವದಲ್ಲಿ ಪೋಲಿಯೋ ನಿರ್ಮೂಲನೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. ಆಯಾ ಸಂದರ್ಭಕ್ಕೆ ಎದುರಾಗುವ ವಿಪತ್ತುಗಳ ನಿರ್ವಹಣೆಯಲ್ಲಿ ಸ್ಥಳೀಯ ಸರ್ಕಾರಗಳಿಗೆ ರೋಟರಿ ನೀಡುವ ನೆರವು ಬಹುದೊಡ್ಡ ಮಟ್ಟದಲ್ಲಿದ್ದು, ಇಂತಹ ಸಂಸ್ಥೆಗಳ ಕಾರ್ಯಗಳಲ್ಲಿ ಭಾಗವಹಿಸುವುದೇ ಹೆಮ್ಮೆಯ ಸಂಗತಿ. ರೋಟರಿ ನಿಸ್ವಾರ್ಥ ಮನೋಭಾವದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕಲಿಕೆಗೆ ಯಾವುದೇ ಮಿತಿ ಇರುವುದಿಲ್ಲ. ಉತ್ತಮ ಪರಿಶ್ರಮದೊಂದಿಗೆ ಜ್ಞಾನಾರ್ಜನೆ ಪಡೆದಲ್ಲಿ ವಿದ್ಯೆಯೆಂಬ ಅಮೂಲ್ಯ ಸಂಪತ್ತನ್ನು ಯಾರಿಂದಲೂ ಅಪಹರಿಸಲಾಗದು. ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸರ್ಕಾರಿ ಶಾಲೆಗಳನ್ನು ರೋಟರಿ ಸಂಸ್ಥೆಯಿಂದ ದತ್ತು ಪಡೆದು ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದು ಸಲಹೆ ನೀಡಿದರು.
ಚನ್ನರಾಯಪಟ್ಟಣ ರೋಟರಿ ಸಂಸ್ಥೆ ಅಧ್ಯಕ್ಷ ಬಿ.ವಿ.ವಿಜಯ್‌ಕುಮಾರ್ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ರೋಟರಿ ಆಯೋಜಿಸುವ ಕಾರ್ಯಕ್ರಮಗಳು ತನ್ನದೇ ಆದ ಛಾಪು ಮೂಡಿಸುತ್ತಿವೆ. ಸಮಾಜದಲ್ಲಿ ಹತ್ತಾರು ಕಾರ್ಯಗಳನ್ನು ರೂಪಿಸಿ, ನೊಂದವರ ಪರ ನಿಲ್ಲುತ್ತಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಎಚ್.ಜಿ.ಮಲ್ಲೇಗೌಡ ಮಾತನಾಡಿ, ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಪತ್ರಿಕೆಗಳು ನಿಮ್ಮ ಗುರಿಗಳನ್ನು ಸಾಧಿಸಲು, ಸರಿಯಾದ ಹಾದಿಯಲ್ಲಿ ನಡೆಸಲು ಸಹಕಾರಿಯಾಗುತ್ತವೆ. ಕಲಿಕೆಯು ಆಜೀವ ಪ್ರಕ್ರಿಯೆಯಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ಗೀಳು ಕಡಿಮೆ ಮಾಡಿಕೊಂಡು ಮಾನಸಿಕ ಒತ್ತಡದಿಂದ ದೂರಾಗಬೇಕು. ಪತ್ರಿಕೆಗಳು ಗತವೈಭವ ಮತ್ತು ಮುಂದಿನ ಪೀಳಿಗೆಗೆ ಜ್ಞಾನ ರವಾನೆ ಮತ್ತು ಬದುಕಿನ ಭವಿಷ್ಯವನ್ನು ರೂಪಿಸುತ್ತದೆ ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಡಾ.ಕುಮುದಾ, ಖಜಾಂಚಿ ನಟರಾಜ್, ವಲಯ ಸೇನಾನಿ ಜಯ ರಾಘವೇಂದ್ರ, ಪದ್ಮನಾಭ, ಶಿವನಂಜೇಗೌಡ, ನವೀನ್, ಸಿ.ಎಲ್.ಕಿಶೋರ್ ಕುಮಾರ್, ರಶ್ಮಿ, ಪುಟ್ಟರಾಜು, ರಾಜು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಟಿ.ಆನಂದ್, ಶಿಕ್ಷಕರು ಭಾಗವಹಿಸಿದ್ದರು.