ದೇವನಹಳ್ಳಿ: ಪ್ರಜಾಪ್ರಭುತ್ವದ 4ನೇ ಅಂಗ ಎನಿಸಿಕೊಳ್ಳುವ ಪತ್ರಿಕೆಗಳ ಮೇಲೆ ಹಿಡಿತ ಸಾಧಿಸಲು ಆಡಳಿತ ಪಕ್ಷಗಳು ಪ್ರಯತ್ನ ಮಾಡುತ್ತಲೇ ಇವೆ. ಇದರಿಂದ ಅದರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಮೊದಲು ಆಡಳಿತ ಪಕ್ಷಗಳು ಮಾಧ್ಯಮದ ಮೇಲೆ ಹಿಡಿತ ಸಾಧಿಸುವ ಪ್ರಯತ್ನಗಳನ್ನು ನಿಲ್ಲಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರಿಗೆ ಕೆಪಿಸಿಸಿ ಕಾರ್ಯದರ್ಶಿ ಎ.ಸಿ ಶ್ರೀನಿವಾಸ್ ಕೊಡುಗೆಯಾಗಿ ನೀಡಿದ ದಿನಸಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರಗಳ ಪರ-ವಿರೋಧ ಏನೇ ಇರಲಿ. ವಾಸ್ತವ ಸುದ್ದಿಗಳನ್ನು ಬಿತ್ತರಿಸಲು ಅವಕಾಶ ನೀಡುತ್ತಿಲ್ಲ. ಕರೊನಾ ಕಾಲದಲ್ಲೂ ಜೀವದ ಹಂಗು ತೊರೆದು ಸುದ್ದಿ ಮಾಡುವ ಪತ್ರಕರ್ತರು ನಿಜವಾದ ಕರೊನಾ ವಾರಿಯರ್ಸ್ ಎಂದರು.
ಶಾಸಕ ರಾಮಲಿಂಗಾ ರೆಡ್ಡಿ ಮಾತನಾಡಿ, ಕರೊನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಸಾಕಷ್ಟು ಎಡವಿದೆ. ಮೊದಲ ಅಲೆ ಬಂದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ತಜ್ಞರು ಎರಡನೇ ಅಲೆಯ ಭೀಕರತೆ ಬಗ್ಗೆ ಮುಂಚಿತವಾಗಿಯೇ ಎಚ್ಚರಿಸಿದ್ದರು. ಈ ವಿಷಯಗಳ ಅರಿವಿದ್ದರೂ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಿಲ್ಲ. ಇದರಿಂದ ಸೋಂಕಿನ ತೀವ್ರತೆ ಹೆಚ್ಚಾಗಿ ಸಾಕಷ್ಟು ಸಾವು-ನೋವುಗಳು ಸಂಭವಿಸಿದವು ಎಂದರು.
ಕರೊನಾ ಲಸಿಕೆ ವಿಚಾರವನ್ನೂ ಸರ್ಕಾರ ಸಮರ್ಪಕವಾಗಿ ನಿರ್ವಹಿಸಲಿಲ್ಲ. ಖಾಸಗಿಯವರ ಬಳಿ ಸಿಗುವ ಲಸಿಕೆ, ಇವರಲ್ಲಿ ಹೇಗೆ ಕೊರತೆ ಉಂಟಾಗಲು ಸಾಧ್ಯ?, ನ್ಯಾಯಾಲಯಗಳು ಚಾಟಿ ಬೀಸಲು ಶುರು ಮಾಡಿದ ಮೇಲೆ ಸರ್ಕಾರಗಳು ಎಚ್ಚೆತ್ತುಕೊಂಡವು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಂಡಿಬೆಲೆ ರಾಜಣ್ಣ ಮಾತನಾಡಿ, ಸರ್ಕಾರ ನಮ್ಮನ್ನು ಕರೊನಾ ವಾರಿಯರ್ಸ್ ಎಂದು ಪರಿಗಣಿಸಿದ್ದರೂ, ಯಾವುದೇ ಸಹಕಾರ ಸಿಕ್ಕಿರಲಿಲ್ಲ. ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಸಿಎಂ ಬಳಿ ಮಾತನಾಡಿದ ನಂತರ ಸೊಂಕಿನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ೋಷಿಸಲಾಯಿತು. ಅಧ್ಯಕ್ಷರ ಮನವಿ ಮೇರೆಗೆ ಎಲ್ಲ ಪತ್ರಕರ್ತರಿಗೂ ಲಸಿಕೆ ಹಾಕಲಾಯಿತು ಎಂದು ಹೇಳಿದರು.
ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್, ಮಾಜಿ ಶಾಸಕರಾದ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ಪುರಸಭೆ ಅಧ್ಯಕ್ಷೆ ರೇಖಾ, ಮಾಜಿ ಅಧ್ಯಕ್ಷ ಸಿ. ಜಗನ್ನಾಥ್, ಸದಸ್ಯೆ ಗೀತಾ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಆರ್. ಸುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷ ಶಾಂತಕುಮಾರ್, ಕಾರ್ಯದರ್ಶಿ ಎಸ್.ಪಿ. ಮುನಿರಾಜ್, ಮುಖಂಡರಾದ ಎ.ಚಿನ್ನಪ್ಪ, ಸೋಮಶೇಖರ್, ಎಸ್.ಆರ್.ರವಿಕುಮಾರ್ ಮತ್ತಿತರರಿದ್ದರು.