ಜಿಲ್ಲೆ

ಪತ್ರಿಕೆ ವಿತರಣೆ ಎಂದರೆ ಸಣ್ಣ ಕೆಲಸವಲ್ಲ

ಮೈಸೂರು: ಪತ್ರಿಕೆ ವಿತರಣೆ ಎಂದರೆ ಸಣ್ಣ ಕೆಲಸವಲ್ಲ. ಎಲ್ಲ ಕೆಲಸಕ್ಕೂ ಅದರದೇ ಆದ ಗೌರವವಿದೆ ಎಂದು ಕೆಪಿಸಿಸಿ ಸದಸ್ಯ ಗುರುಪಾದ ಸ್ವಾಮಿ ಹೇಳಿದರು.


ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂನ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಹಿರಿಯ ಪತ್ರಿಕಾ ವಿತರಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಪತ್ರಿಕೆ ಎಷ್ಟೇ ಮುದ್ರಣವಾದರೂ ಓದುಗರನ್ನು ತಲುಪಿದಾಗಲೇ ಸಾರ್ಥಕವಾಗುವುದು. ಬೆಳಗ್ಗೆ ಪತ್ರಿಕೆ ಬರದಿದ್ದರೆ ಎಲ್ಲರಿಗೂ ನೆನಪಾಗುವುದು ವಿತರಕರು ಎಂದರು.


ಕರೊನಾದಂತಹ ಸಂಕಷ್ಟದ ಸಮಯದಲ್ಲೂ ಕೂಡ ಪ್ರಾಣಕ್ಕೆ ಹೆದರದೆ ಸಮಯಕ್ಕೆ ಸರಿಯಾಗಿ ಪತ್ರಿಕೆಗಳನ್ನು ಮುಟ್ಟಿಸುವ ಕೆಲಸವನ್ನು ವಿತರಕರು ಮಾಡಿದ್ದು, ಅವರನ್ನು ಸನ್ಮಾನಿಸುವುದು ದೊಡ್ಡ ಕೆಲಸ ಎಂದರು.


ಪತ್ರಿಕಾ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಮಾತನಾಡಿ, ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆ, ಪತ್ರಿಕೆ ವಿತರಿಸಲು ಶಾಶ್ವತ ಸೂರು ವ್ಯವಸ್ಥೆ ಹಾಗೂ ಈ ಹಿಂದೆ ಸರ್ಕಾರ ಘೋಷಣೆ ಮಾಡಿದ ಕ್ಷೇಮಾವೃದ್ಧಿ ಸಂಘದ ನಿಧಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಅದರಿಂದ ಪತ್ರಿಕಾ ವಿತರಕರಿಗೆ ಅನುಕೂಲವಾಗುತ್ತದೆ. ಸರ್ಕಾರದ ವತಿಯಿಂದ ಪ್ರತಿವರ್ಷ ಪತ್ರಿಕಾ ವಿತರಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.


ಹಿರಿಯ ಪತ್ರಿಕಾ ವಿತರಕರಾದ ಚಂದ್ರು, ಲೋಕೇಶ್, ಮಹದೇವ್, ಎಂ.ಪಿ.ಗುಂಡಪ್ಪ, ಕನಕ ರತ್ನ, ರಾಮಚಂದ್ರು, ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು.


ಕೆಪಿಸಿಸಿ ಸದಸ್ಯರಾದ ನಜರ್‌ಬಾದ್ ನಟರಾಜ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಉದ್ಯಮಿ ಜಯರಾಮ್, ಕಾಂಗ್ರೆಸ್ ಮುಖಂಡರಾದ ಶ್ರೀಪಾಲ್, ಹೊಯ್ಸಳ ಟ್ರಸ್ಟ್ ಅಧ್ಯಕ್ಷ ಎಂ.ಪಿ.ರಾಜೇಶ್, ಮುಖಂಡರಾದ ಮಂಜೇಗೌಡನ ಕೊಪ್ಪಲು ರವಿ, ಲೋಕೇಶ್, ವರುಣ ಮಹದೇವ್, ಯೋಗೇಶ್ ಯಾದವ್, ಬಸವಣ್ಣ ಇನ್ನಿತರರು ಇದ್ದರು.