ಬೀದರ್: ಮನೆ ಮನೆಗೆ ಪತ್ರಿಕೆ ವಿತರಣೆ ಮಾಡುವವರಿಗೆ ಶ್ರೀ ವೈಷ್ಣೋದೇವಿ ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಆಹಾರ ಕಿಟ್ ವಿತರಣೆ ಮಾಡಲಾಯಿತು. ಕರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಯಿಂದ ಹಲವು ವರ್ಗದ ಜನರು ಸಂಕಷ್ಟದಲ್ಲಿದ್ದಾರೆ. ಇಂಥದರಲ್ಲಿ ಪ್ರತಿದಿನ ಬೆಳಗ್ಗಿನ ಜಾವ ಮನೆ ಮನೆಗೆ ಪತ್ರಿಕೆ ಹಂಚುವ ಹುಡುಗರ ಶ್ರಮಕ್ಕೆ ಮೆಚ್ಚಿ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಅವರು ಸಕ್ಕರೆ, ಎಣ್ಣೆ, ಅವಲಕ್ಕಿ, ಖಾರದ ಪುಡಿ, ಟೂತ್ಪೇಸ್ಟ್, ಬಿಸ್ಕಿಟ್ ಇತರ ದಿನಸಿ ವಸ್ತುಗಳನ್ನು ಒಳಗೊಂಡಿರುವ ಆಹಾರ ಕಿಟ್ ವಿತರಿಸಿದರು. ಕರೊನಾ ಭಯದ ನಡುವೆ ಮನೆ ಮನೆಗೆ ಪತ್ರಿಕೆ ವಿತರಣೆ ಮಾಡುವ ಕಾರ್ಯ ಶ್ಲಾಘನೀಯ. ಕರೊನಾ ಕುರಿತು ಪ್ರತಿಯೊಂದು ವಿಷಯ ತಿಳಿದುಕೊಳ್ಳುವಲ್ಲಿ ಪತ್ರಿಕೆಗಳ ಪಾತ್ರ ಹಿರಿದಾಗಿದೆ. ಹೀಗಾಗಿ ಬಡ ಪತ್ರಿಕಾ ವಿತರಕರಿಗೆ ಆಹಾರ ಕಿಟ್ ವಿತರಣೆ ಮಾಡಲಾಗಿದೆ ಎಂದು ಬಿರಾದಾರ ತಿಳಿಸಿದರು. ಭಾರತಿ ಸಂಗಮೇಶ ಬಿರಾದಾರ, ಮಹೇಶ ಬಿರಾದಾರ ಇತರರಿದ್ದರು.