ಜಿಲ್ಲೆ

ಪತ್ರಿಕಾ ವಿತರಕರ ಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ: ಸಿ. ಎನ್.ಬಾಲಕೃಷ್ಣ

ಚನ್ನರಾಯಪಟ್ಟಣ: ಪತ್ರಿಕಾ ವಿತರಕರ ಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂದು ಶಾಸಕ ಸಿ. ಎನ್.ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

 ಪಟ್ಟಣದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ತಾಲ್ಲೂಕು ಪತ್ರಿಕಾ ವಿತರಕರ ಒಕ್ಕೂಟದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 3ನೇ ವರ್ಷದ ವಾರ್ಷಿಕೋತ್ಸವದ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

  ಪತ್ರಿಕಾ ವಿತರಣೆ ಕಾಯಕದ ಹಿಂದಿರುವ ಶ್ರಮ ವಿವರಣೆಗೆ ಮೀರಿದ್ದು. ವಿಶ್ವದ ವಿದ್ಯಮಾನವನ್ನು ಓದುಗ ದೊರೆಯ ಮನೆ ಬಾಗಿಲಿಗೆ ಮುಟ್ಟಿಸುವ ಪತ್ರಿಕೆ ವಿತರಕರ ಕುರಿತು ಅಭಿಮಾನ, ಮೆಚ್ಚಗೆ ವ್ಯಕ್ತಪಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

  ಚಳಿ ಗಾಳಿ ಮಳೆ ಬಿಸಿಲನ್ನು ಲೆಕ್ಕಿಸದೆ ಬೆಳಗ್ಗೆ ನಿಮ್ಮ ಮನೆಯ ಬಾಗಿಲಿಗೆ ಪತ್ರಿಕೆ ತಲಿಪಿಸು ವುದರಿಂದ ಪತ್ರಿಕೆ ಇನ್ನೂ ಉಳಿದಿದೆ ಬರೀ ಸಂಪಾದಕರು ಹಾಗೂ ವರದಿಗಾರರು ಇದ್ದರೆ ಸಾಲದು. ಸಂಪಾದಕರ ಬಂಡವಾಳಕ್ಕೆ ವರದಿಗಾರರ ವರದಿಗೆ ಬೆಲೆ ಬರಬೇಕಾದರೆ ವಿತರಕ ಪತ್ರಿಕೆ ಮನೆ ಮನೆ ಬಾಗಿಲಿಗೆ ತಲುಪಿದಾಗ ಮಾತ್ರ ಸಾಧ್ಯ ಎಂದು ತಿಳಿಸಿದರು.

  ಮಳೆ, ಗಾಳಿಯೆನ್ನದೇ ನಸುಗಿನಲ್ಲೇ ಎದ್ದು ಪತ್ರಿಕೆಗಳನ್ನು ಜೋಡಿಸಿಕೊಂಡು ಓದುಗರ ಮನೆ ಬಾಗಿಲಿಗೆ ತಲುಪಿಸುವ ವಿತರಿಕರಿಗೆ ಹಲವು ಸಂಕಷ್ಟಗಳಿವೆ. ತಮಗೆ ಸಿಗುವ ಅಲ್ಪ ಕಾಸಿನಲ್ಲೇ ತೃಪ್ತಿ ಪಡುವ ವಿತರಕರು ಚಾಚೂತಪ್ಪದೆ ಪ್ರತಿದಿನ ಪತ್ರಿಕೆ ಮುಟ್ಟಿಸುವ ಕಾರ್ಯ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  ಈ ಸಂಘಟಿತ ವಲಯದ ಕಾರ್ಮಿಕರಿಗೆ ಮುಖ್ಯವಾಗಿ ಜೀವನ ಭದ್ರತೆ ಇಲ್ಲ. ಪಟ್ಟಣದಲ್ಲಿ 4 ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಅದರಲ್ಲಿ 1 ಕೊಠಡಿಯನ್ನು ವಿತರಕರಿಗೆ ಕಾರ್ಯ ಚಟುವಟಿಕೆಗೆ ನೀಡಲಾಗುವುದು, 250 ಮಂದಿ ತಾಲ್ಲೂಕಿನಲ್ಲಿ  ಪತ್ರಿಕಾ ವಿತರಕರಿದ್ದು, ಅವರ ನೆರವಿಗೆ ಪತ್ರಿಕಾ ವಿತರಕರ ಕ್ಷೇಮಾಬಿವೃದ್ದಿ ನಿಧಿಗೆ ನಮ್ಮ ಒಂದು ತಿಂಗಳ ವೇತನವನ್ನು ಪ್ರಥಮ ದೇಣಿಗೆಯಾಗಿ  ನೀಡಿ ಅಗಸ್ಟ್ ತಿಂಗಳ ಕೊನೆಯಲ್ಲಿ ಸಂಘ ಸಂಸ್ಥೆಗಳು ಸಹಕಾರದಿಂದ ಕ್ಷೇಮಾಬಿವೃದ್ದಿ ನಿಧಿಗೆ ಹೆಚ್ಚಿನ   ದೇಣಿಗೆ ಸಂಗ್ರಹಿಸಿ ಪತ್ರಿಕಾ ವಿತರಕರ ಒಕ್ಕೂಟ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

  ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಮಾತನಾಡಿ,  ವರ್ಷದಿಂದ ವರ್ಷಕ್ಕೆ ಸಂಘಟನೆ ಸಾಕಷ್ಟು ಬೆಳೆದಿದೆ. ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಟ್ಟಿಗೆ ಸಾಗಿದರೆ ಮಾತ್ರ ನಿಮ್ಮ ಬೇಡಿಕೆ ಈಡೇರಲು ಸಾಧ್ಯ. ಆದ್ದರಿಂದ ಸಂಘಟನೆಗೆ ಮೊದಲು ಆದ್ಯತೆ ನೀಡಿ ಎಂದರು.

  ರಾಜ್ಯ ಪತ್ರಿಕಾ ವಿತರಕರ ರಾಜ್ಯದ್ಯಕ್ಷ ಕೆ.ಶಂಭುಲಿಂಗ ಮಾತನಾಡಿ, ವಿತರಕರನ್ನು ಲಘುವಾಗಿ ಕಾಣಬಾರದು ರಾಜ್ಯದಲ್ಲಿ ವಿತರಕರ ಸಂಘಟನೆಗೆ ಬಲಪಡಿಸಲು ಅವರ ಸೇವೆಗೆ  ತಾವು ಸಿದ್ದರಾಗಿದ್ದೇವೆ ಎಂದು ತಿಳಿಸಿದರು.

 ಪ್ರತಿಭಾವಂತ ವಿದ್ಯಾರ್ಥಿಗಳಾದ ಜನಪ್ರಿಯ ಮೈತ್ರಿ ಚೇತನ್ ಪವನ್ ಕುಮಾರ್ ಹಾಗೂ ಹಿರಿಯ ಪತ್ರಕರ್ತ ಜಯರಾಮ್ ಅವರನ್ನು ಗೌರವಿಸಲಾಯಿತು.

  ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜು, ವಿತರಕರ ಸಂಘದ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಬೆಳಗಾವಿಯ ನಾಮದೇವ್ ಜಿಲ್ಲಾಧ್ಯಕ್ಷ ಕಿರಣ್, ವಿತರಕರ ಸಂಘದ ಕಾರ್ಯದರ್ಶಿ ಎ.ಎಂ. ಜಯರಾಮ್, ಉಪಾಧ್ಯಕ್ಷ ಸಿ.ಎಸ್. ಕೃಷ್ಣಮೂರ್ತಿ, ಸಹ ಕಾರ್ಯದರ್ಶಿ ಸಿ.ಎಸ್. ಮಂಜುನಾಥ್, ಸಿ.ಎ‌ ವೆಂಕಟೇಶ್, ನಿರ್ದೇಶಕರಾದ ಗೋವಿಂದ ಶೆಟ್ಟಿ, ಗುರುಪ್ರಸಾದ್, ನಂದನ್ ಪುಟ್ಟಣ್ಣ, ಚಂದ್ರಶೇಖರ್, ಅನಿಲ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.