ಮೈಸೂರು: ಪತ್ರಿಕಾ ವಿತರಕರಿಗೆ ಸೌಲಭ್ಯವನ್ನು ನೀಡುವ ಮೂಲಕ ಅವರ ರಕ್ಷಣೆಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಹೇಳಿದರು.
ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಗ್ರಹಾರ ವೃತ್ತದಲ್ಲಿ ಭಾನುವಾರ ಹಿರಿಯ ಪತ್ರಿಕಾ ವಿತರಕರನ್ನು ಸನ್ಮಾನಿಸಿ ಮಾತನಾಡಿದರು.
ಜನಸಾಮಾನ್ಯರಿಗೆ ಬೆಳಗ್ಗೆ ಏಳುತ್ತಲೇ ಪತ್ರಿಕೆ ಓದುವ ಹವ್ಯಾಸ ಇರುತ್ತದೆ. ಅದನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಮುಖ್ಯವಾಗಿದೆ. ಬೇಸಿಗೆ, ಚಳಿ, ಮಳೆ ಎನ್ನದೆ ನಿತ್ಯ ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಾರೆ. ಜಗತ್ತು ಎಷ್ಟೇ ಆಧುನಿಕವಾದರೂ ಪತ್ರಿಕೆ ಓದುವುದನ್ನು ಮಾತ್ರ ಯಾರೂ ಬಿಟ್ಟಿಲ್ಲ. ಈ ನಿಟ್ಟಿನಲ್ಲಿ ಪತ್ರಿಕಾ ವಿತರಕರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು ಎಂದರು.
ಕರೊನಾ ಸೇನಾನಿಗಳ ರೀತಿ ಕೆಲಸ ಮಾಡಿದರೂ ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಯಾವುದೇ ಕನಿಷ್ಠ ಸೌಲಭ್ಯವೂ ಸಿಗುತ್ತಿಲ್ಲ. ವರ್ಷಪೂರ್ತಿ ಕೆಲಸ ಮಾಡುವ ಅವರಿಗೆ ವಿಶೇಷ ಭತ್ಯೆ, ಅವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು ಎಂದರು.
ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ಮಾಜಿ ಪ್ರಧಾನಿ ಅಬ್ದುಲ್ ಕಲಾಂ ಅವರು ಸಹ ಪತ್ರಿಕಾ ವಿತರಕರಾಗಿ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
ಈ ವಿತರಕರು ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ವಾಹನಗಳಿಂದ ಪತ್ರಿಕಾ ಬಂಡಲ್ ಇಳಿಸಿಕೊಳ್ಳಲು, ಹಂಚಿಕೆ ಮಾಡಲು ಕಷ್ಟವಾಗುತ್ತದೆ. ಸ್ವಲ್ಪ ಮಳೆ ಹನಿಗಳು ಬಿದ್ದರೂ ಪತ್ರಿಕೆ ಹಾಳಾಗುತ್ತದೆ. ಆದ್ದರಿಂದ ಪತ್ರಿಕೆಗಳ ಹಂಚಿಕೆಗೆ ಮೈಸೂರು ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ ಸೂಕ್ತ ಜಾಗ ಕಲ್ಪಿಸಿ ಕೊಡಬೇಕು. ಅದರಲ್ಲೂ ನಗರದ ವಸ್ತುಪ್ರದರ್ಶನ ಆವರಣ ಅಥವಾ ಪುರಭವನ ಸೇರಿದಂತೆ ಇನ್ನಿತರ ಯಾವುದಾದರೂ ಸ್ಥಳದಲ್ಲಿ ಪತ್ರಿಕಾ ವಿತರಕರಿಗೆ ಶಾಶ್ವತ ಸ್ಥಳಾವಕಾಶವನ್ನು ಮೈಸೂರು ನಗರಪಾಲಿಕೆ ಮಾಡಿಕೊಡಬೇಕು. ಸರ್ಕಾರ ಪತ್ರಿಕಾ ವಿತರಕರನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ನೀಡುವ ಮೂಲಕ ಅವರನ್ನು ಗೌರವಿಸಬೇಕು ಎಂದು ಹೇಳಿದರು.
ಸುಜೀವ್ ಫೌಂಡೇಷನ್ ಅಧ್ಯಕ್ಷ ರಾಜಾರಾಮ್ ಮಾತನಾಡಿ, ಪತ್ರಿಕಾ ವಿತರಕರಿಗೆ ಗುರುತಿನ ಚೀಟಿ ನೀಡಬೇಕು. ಹಾಗೆಯೇ ನಮ್ಮ ಸಂಸ್ಥೆ ವತಿಯಿಂದ ಮುಂದಿನ ದಿನಗಳಲ್ಲಿ ಇವರಿಗೆ ಜೀವವಿಮೆ, ಪತ್ರಿಕೆ ಹಾಕುವ ಬ್ಯಾಗ್ ಮತ್ತು ಅವರ ರಕ್ಷಣೆಗೆ ಗುಣಮಟ್ಟದ ಜರ್ಕಿನ್ ನೀಡಲಾಗುವುದು ಎಂದು ಹೇಳಿದರು.
40 ವರ್ಷಗಳಿಂದ ಪತ್ರಿಕಾ ವಿತರಣೆ ಕೆಲಸದಲ್ಲಿ ತೊಡಗಿರುವ ಜೆ.ಎಸ್. ಹೋಮದೇವ, ಹರೀಶ್, ಜವರಪ್ಪ, ಮಂಜುನಾಥ್, ಚಂದ್ರಶೇಖರ್ ಜೈದೇವ್, ಪಾರ್ಶ್ವನಾಥ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಇಳೈ ಆಳ್ವಾರ ಸ್ವಾಮೀಜಿ, ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಜಿಲ್ಲಾ ಪತ್ರಿಕಾ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎ.ರವಿ, ಮುಖಂಡರಾದ ನವೀನ್‌ಕುಮಾರ್, ಬಸವರಾಜ್ ಬಸಪ್ಪ, ಸುರೇಶ್, ಚರಣ್‌ರಾಜ್, ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಇನ್ನಿತರರು ಪಾಲ್ಗೊಂಡಿದ್ದರು.