ಜಿಲ್ಲೆ

ಪತ್ರಕರ್ತರು ಸಮಾಜ ತಿದ್ದುವುದರಲ್ಲೇ ಜೀವನ ಸವೆಸುತ್ತಾರೆ

ಕೊಳ್ಳೇಗಾಲ: ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರಲ್ಲಿಯೇ ತಮ್ಮ ಜೀವನ ಸವೆಸುತ್ತಾರೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೊಳ್ಳೇಗಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮೊದಲಿಗಿಂತ ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರವನ್ನು ಸಾರ್ವಜನಿಕರು ಹೆಚ್ಚು ಅವಲಂಬಿಸಿದ್ದಾರೆ. ಅದಕ್ಕೆ ತಕ್ಕಂತೆ ಪತ್ರಿಕೋದ್ಯಮ ಅತಿ ವೇಗವಾಗಿ ಜನರನ್ನು ಆಕರ್ಷಿಸಿ ಸುದ್ದಿ ಪ್ರಚಾರದಲ್ಲಿ ದಾಪುಗಾಲಿಟ್ಟಿದೆ. ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸದಲ್ಲಿ ತಮ್ಮ ಜೀವನವನ್ನು ಸವೆಸುತ್ತಾರೆ. ಅದಕ್ಕಾಗಿಯೇ ಅವರಿಗೆ ಇತರ ಕ್ಷೇತ್ರಗಳಲ್ಲಿರುವವರು ಕೂಡ ಹೆಚ್ಚು ಗೌರವ ನೀಡುತ್ತಾರೆ ಎಂದರು.

ಪತ್ರಕರ್ತರು ಜನರಿಗೆ ಸತ್ಯ ಸುದ್ದಿ ಸಮಾಚಾರಗಳನ್ನು ಕೊಡಬೇಕು. ಗಾಳಿ ಸುದ್ದಿಗಳಿಗೆ ಬೆಲೆ ನೀಡದೆ ಮಾಧ್ಯಮ ಕ್ಷೇತ್ರಕ್ಕೆ ಇನ್ನಷ್ಟು ಗೌರವ ತಂದು ಕೊಡಬೇಕು ಎಂದು ಕಿವಿಮಾತು ಹೇಳಿದರು. ಕೊಳ್ಳೇಗಾಲ ಪಟ್ಟಣದಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕಾಗಿ ಮಾಜಿ ಸಂಸದ ದಿ.ವಿ.ಶ್ರೀನಿವಾಸ ಪ್ರಸಾದ್ ಹಾಗೂ ಮಾಜಿ ಶಾಸಕ ಎನ್. ಮಹೇಶ್ ಅವರು ತಲಾ 5 ಲಕ್ಷ ರೂ. ಅನುದಾನವನ್ನು ನೀಡಿ ಅಡಿಪಾಯ ಹಾಕಿ ಕಟ್ಟಡ ನಿರ್ಮಿಸಲು ಸಹಕಾರಿಯಾಗಿದ್ದಾರೆ ಎಂದು ಸ್ಮರಿಸಿದರು.

ಮುಂದೆ ರಾಜ್ಯ ಸರ್ಕಾರದಿಂದ ನನಗೆ ದೊರೆಯುವ ಅನುದಾನ ಲಭ್ಯತೆ ಆಧರಿಸಿ ಕಟ್ಟಡಕ್ಕೆ ಅನುದಾನ ನೀಡಿ ಉದ್ಘಾಟನೆಗೊಳಿಸುವುದಾಗಿ ಭರವಸೆ ನೀಡಿದರು. ಪತ್ರಕರ್ತರು ಸಮಾಜದ ಎಲ್ಲ ಸಮಸ್ಯೆಗಳಿಗೊ ದಾರಿ ತೋರಿಸುವುದಲ್ಲಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ. ಇದನ್ನು ಅರಿತಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು, ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಪತ್ರಕರ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಧ್ಯಮ ಸಂಜೀವಿನಿ ಎಂಬ ಯೋಜನೆಯನ್ನು ತಂದಿದ್ದು, ಇದು ಜು.1 ರಿಂದ ರಾಜ್ಯದಲ್ಲಿ ಜಾರಿಯಾಗಿದೆ. ಜತೆಗೆ ಉಚಿತ ಬಸ್‌ಪಾಸ್ ಸೌಲಭ್ಯ ಹಾಗೂ ಸರ್ಕಾರದಿಂದ ದೊರೆಯುವ ಇತರ ಸವಲತ್ತುಗಳನ್ನು ಪತ್ರಕರ್ತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜ್ ಕಪ್ಪಸೋಗೆ ಮಾತನಾಡಿ, ವೃತ್ತಿನಿರತ ಪತ್ರಕರ್ತರು ಸಮಾಜದಲ್ಲಿ ತಮಗೆ ದೊರೆಯುವ ಗೌರವದ ತೃಪ್ತಿಯಿಂದಲೇ ಬದುಕುತ್ತಾರೆ. ಅಂತಹ ಪ್ರಾಮಾಣಿಕ ಪತ್ರಕರ್ತರು ಎಂದೆಂದು ಜನ ಮಾನಸದಲ್ಲಿ ಉಳಿಯುತ್ತಾರೆ. ಏತನ್ಮಧ್ಯೆ, ಪತ್ರಕರ್ತರನ್ನು ಸಬಲಿಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶ್ರಮಿಸುತ್ತಿದೆ ಎಂದರು.

ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ತಾಲೂಕಿನ ಪತ್ರಕರ್ತರಾದ ಚಿಕ್ಕಮಾಳಿಗೆ, ಎನ್.ನಟರಾಜು, ಪಿ.ಜಗದೀಶ್ ಅವರಿಗೆ ಸಂಘದಿಂದ ವಾರ್ಷಿಕ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ‌್ಯಕಾರಿಣಿ ಸದಸ್ಯ ಗೂಳಿಪುರ ನಂದೀಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಸಿದ್ದರಾಜು, ಸಂಘದ ಜಿಲ್ಲಾ ಕಾರ್ಯದರ್ಶಿ ಡಿ.ನಟರಾಜು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎನ್.ರಾಜೇಶ್, ತಾಲೂಕು ಸಂಘದ ಉಪಾಧ್ಯಕ್ಷ ಎಂ.ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಪವನ್ ಕುಮಾರ್, ಕಾರ್ಯದರ್ಶಿ ಎಂ.ಪಿ.ಮಹೇಶ್, ನಿರ್ದೇಶರಾದ ಎಸ್.ರಾಜಶೇಖರ್, ಎಸ್.ರಾಜು, ಚಂದ್ರಶೇಖರ್, ಅವಿನ್ ಪ್ರಕಾಶ್, ಪ್ರೇಮ್ ಸಾಗರ್, ಸಾಗರ್ ಹಾಗೂ ಇತರ ಪತ್ರಕರ್ತರು ಇದ್ದರು.