ಮೈಸೂರು: ಮುಖ್ಯಮಂತ್ರಿ ಕಚೇರಿಯಿಂದ ಆಯ್ದ ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ಮೂಲಕ ಹಣ ಹಂಚಿರುವುದು ಖಂಡನೀಯ. ಜನರ ದೃಷ್ಟಿಯಲ್ಲಿ ಪತ್ರಕರ್ತರಿಗೆ ಕೀಳುಮಟ್ಟದ ಭಾವನೆ ಬರುವ ಹಾಗೆ ಮಾಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ರಾಜ್ಯ ಇಡೀ ದೇಶದಲ್ಲಿ ತಲೆ ತಗ್ಗಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ. ಪತ್ರಕರ್ತರನ್ನೇ ಖರೀದಿಸಲು ಹೋಗಿದೆ. ಇದು ದೊಡ್ಡ ಕಳಂಕ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಬಿಜೆಪಿ ಸರ್ಕಾರ ಪತ್ರಕರ್ತರಿಗೆ ಭ್ರಷ್ಟಾಚಾರದ ಕಳಂಕವನ್ನು ಅಂಟಿಸಿದೆ. ಇದನ್ನು ಯಾರು ತೊಳೆಯುತ್ತಾರೆ. ಪತ್ರಕರ್ತರ ಒಳ್ಳೆಯತನಕ್ಕೆ ಮಸಿ ಬಳಿಯುವ ಕೆಲಸವನ್ನು ಬಿಜೆಪಿ ಮಾಡಿದೆ. ಇದರಲ್ಲಿ ಸಿಎಂ, ಮಂತ್ರಿಗಳಾದ ಆರ್.ಆಶೋಕ್, ಡಾ.ಸುಧಾಕರ್, ಅಶ್ವತ್ಥನಾರಾಯಣ್ ಸೇರಿ ಮಾಡಿದ್ದಾರೆ. ಈ ಕುರಿತು ನ್ಯಾಯಾಂಗ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಒಬ್ಬ ಜೋಕರ್ ಆಗಲೂ ಲಾಯಕ್ ಇಲ್ಲ. ಜೋಕರ್‌ಗೂ ಒಂದು ಮೌಲ್ಯ ಇದೆ. ಮೈಸೂರಿನಲ್ಲಿ ಸಿದ್ದರಾಮಯ್ಯ ಅವರನ್ನು ವಜ್ರಮುನಿ ಎಂದು ಕರೆದಿದ್ದಾರೆ. ವಜ್ರಮುನಿ ಒಬ್ಬ ಅದ್ಭುತ ನಟ. ಅವರಿಗೆ ಅವಮಾನ ಮಾಡಿದ್ದಾರೆ. ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ನಿಮ್ಮ ಬಂಡವಾಳ ನಮಗೂ ಗೊತ್ತು ಎಂದು ಹರಿಹಾಯ್ದರು.