ಜಿಲ್ಲೆ

ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ಹೃದ್ರೋಗ ಚಿಕಿತ್ಸೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ನಗರದ ಇಂಡಿಯಾನಾ-ಎಸ್‌ಜೆಎಂ ಹಾರ್ಟ್ ಸೆಂಟರ್ ಜಿಲ್ಲೆಯ ನೋಂದಾಯಿತ ಪತ್ರಕರ್ತರಿಗೆ ಒಪಿಡಿ ಸೇವೆ ಹಾಗೂ ಹೃದ್ರೋಗಕ್ಕೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಿದೆ ಎಂದು ಹಾರ್ಟ್ ಸೆಂಟರ್ ಕಾರ್ಯ ನಿರ್ವಾಹಕ ಅಧಿಕಾರಿ ರೂಪೇಶ್ ಕುಮಾರ್ ಶೆಟ್ಟಿ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಹಾರ್ಟ್‌ಸೆಂಟರ್ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾಭವನದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಪತ್ರಕರ್ತರು ಮತ್ತು ಕುಟುಂಬ ಸದಸ್ಯರಿಗೆ ಬುಧವಾರ ಏರ್ಪಡಿಸಿದ್ದ ಹೃದ್ರೋಗ ಉಚಿತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಪತ್ರಿಕಾರಂಗವಿಂದು ಉದ್ಯಮವಾಗಿ ಬದಲಾಗಿದ್ದರೂ ಪತ್ರಕರ್ತರು ಬಡವರಾಗಿ ಮುಂದುವರಿದ್ದಾರೆ. ಆರೋಗ್ಯದ ಕಾಳಜಿ ಮರೆತು ಕೆಲಸ ಮಾಡುವ ಪತ್ರಕರ್ತರಿಗೆ ಒಪಿಡಿ ಉಚಿತ ಸೇವೆ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ಸೌಲಭ್ಯವನ್ನು ಮುಂದಿನ ವಾರದಲ್ಲಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಮಾತನಾಡಿ,ಪತ್ರಕರ್ತರು ಸಂಕಷ್ಟದಲ್ಲಿ ಜೀವನ ನಡೆಸುತ್ತಾರೆ. ಬಾಗಲಕೋಟೆಯ ಪತ್ರಕರ್ತ 42 ವರ್ಷ ವಯಸ್ಸಿನ ಪ್ರಕಾಶ್‌ಗುಳೇದಗುಡ್ಡ ಅವರು ಈಚೆಗೆ ವರದಿಗೆಂದು ತೆರಳಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ನಿಧನ ಹೊಂದಿದ್ದಾರೆ. ಪತ್ರಕರ್ತರು ಕೆಲಸದ ಒತ್ತಡದ ನಡುವೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹೃದಯ ಶ್ರೀಮಂತಿಕೆಯಿಂದ ಸಮಾಜದ ಸಂಕಷ್ಟಗಳಿಗೆ ಸ್ಪಂದಿಸಬೇಕು.ಹಿಂದುಳಿದ, ಬಡತನದಿಂದ ಕೂಡಿರುವ ಈ ಜಿಲ್ಲೆಯಲ್ಲೇ ಹೃದ್ರೋಗಕ್ಕೆ ಸಂಬಂಧಿಸಿದಂತೆ ಪರಿಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆಗಳು ಲಭ್ಯವಾಗಬೇಕು ಎಂದರು.

ಹೃದ್ರೋಗ ತಜ್ಞ ಡಾ.ಆರ್.ಎಸ್. ಕಾರ್ತಿಕ್ ಮಾತನಾಡಿ, ತಂಬಾಕು ಸೇವನೆ ದುಶ್ಚಟ, ಬದಲಾದ ಜೀವನ ಶೈಲಿ ಹೃದ್ರೋಗಕ್ಕೆ ಪ್ರಮುಖ ಕಾರಣವಾಗಿದೆ. ವಾರದಲ್ಲಿ ಕನಿಷ್ಠ ಐದು ದಿನಗಳು ಹಾಗೂ ನಿತ್ಯ ಒಂದು ತಾಸು ನಡಿಗೆ. ಆಟೋಟ, ವ್ಯಾಯಾಮ ಹಾಗೂ ಸೂಕ್ತ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕಿದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಬಿ. ದಿನೇಶ್‌ಗೌಡಗೆರೆ, ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಹರಿಯಬ್ಬೆ ಸಿ. ಹೆಂಜಾರಪ್ಪ, ಸಂಘದ ಜಿಲ್ಲಾ ಕಾರ್ಯದರ್ಶಿ ವೀರೇಶ್ ವಿ. ಅಪ್ಪು, ವಿನಾಯಕ ಬಿ. ತೊಡರನಾಳ್, ಪತ್ರಕರ್ತರಾದ ದರ್ಶನ್ ಇಂಗಳದಾಳ್, ರಂಗನಾಥ್, ನಾಗೇಶ್, ಪ್ರಹ್ಲಾದ್, ಗಿರೀಶ್ ಇತರರು ಇದ್ದರು.