ಜಿಲ್ಲೆ

ಪತ್ರಕರ್ತರಿಗೆ ಕಾನೂನು ಅರಿವು ಅತಿ ಮುಖ್ಯ : ಹೈಕೋರ್ಟ್ ವಿಶ್ರಾಂತ ನ್ಯಾ.ನಾಗಮೋಹನ್ ದಾಸ್

reportermys

ಹಾಸನ : ಪತ್ರಕರ್ತರೂ ಸೇರಿದಂತೆ ಜನರಿಗೆ ಕಾಲ ಕಾಲಕ್ಕೆ ತರಬೇತಿ ಅವಶ್ಯಕ. ಕಲಿಯುವುದರ ಜೊತೆಗೆ ಕಾಲ ಕಾಲಕ್ಕೆ ಅನುಭವ ತೆಗೆದುಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪತ್ರಕರ್ತರಿಗೆ ಇಂಥ ಕಾರ್ಯಾಗಾರಗಳ ಅವಶ್ಯತೆ ಇದೆ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಹೇಳಿದರು.

ಜಿಲ್ಲಾ ಕಸಾಪ ಸಹಕಾರದೊಂದಿಗೆ ಜಿಲ್ಲಾ ಪತ್ರಕರ್ತರ ಸಂಘ, ಪರಿಷತ್ ಭವನದಲ್ಲಿ ಪತ್ರಕರ್ತರಿಗೆ ಶನಿವಾರ ಏರ್ಪಡಿಸಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ‘ಪತ್ರಕರ್ತರು ಮತ್ತು ಕಾನೂನು’ ವಿಷಯವಾಗಿ ಅವರು ಮಾತನಾಡಿದರು. ಪತ್ರಕರ್ತರು ಇಂಥ ಅವಕಾಶ ಕಳೆದುಕೊಳ್ಳಬೇಡಿ. ದೇಶದ ಸಾಕ್ಷರತೆ ಪ್ರಮಾಣ ಶೇ.80 ಇದ್ದರೂ, ನಮ್ಮಲ್ಲಿ ಗುಣಮಟ್ಟದ ಶಿಕ್ಷಣ ಇಲ್ಲ. ಗುಣಾತ್ಮಕ ಮತ್ತು ಸಮಾನ ಶಿಕ್ಷಣದ ಕೊರತೆ ಇದೆ. ಇದರ ಜೊತೆಗೆ ಕಾನೂನು ಸಾಕ್ಷರತೆ ಸಹ ಬೇಕು ಎಂದು ಪ್ರತಿಪಾದಿಸಿದರು.

ಸ್ವಾತಂತ್ರೃ ಹೋರಾಟದ ಜೊತೆಗೆ ಪತ್ರಿಕೆಗಳೂ ಹೋರಾಟ ಆರಂಭಿಸಿದವು. ಸ್ವಾತಂತ್ರೃ ಹೋರಾಟಕ್ಕೆ ಭುಜ ಕೊಟ್ಟು ನಿಂತಿದ್ದು ಮಾಧ್ಯಮಗಳು. ಪತ್ರಿಕಾ ಸ್ವಾತಂತ್ರೃ, ಸ್ವಾತಂತ್ರೃ ಹೋರಾಟ ಹತ್ತಿಕ್ಕಲು ಬ್ರಿಟಿಷರು ಅಂದು ಅನೇಕ ಕಾನೂನುಗಳನ್ನು ಜಾರಿಗೆ ತಂದರು. ಒಡೆದು ಆಳುವ ನೀತಿ ಆರಂಭಿಸಿದರು. ದಮನಕಾರಿ ನೀತಿ ಅನುಸರಿಸಿದರು. ಹಿಂಸೆ, ಕ್ರೌರ್ಯ, ಚಿತ್ರಹಿಂಸೆ ಜತೆಗೆ ಬರ್ಬರ ಕಾಯ್ದೆ ಜಾರಿಗೆ ತಂದರು. ದೇಶದ್ರೋಹದಂತಹ ಗಂಭೀರ ಆರೋಪ ಹೊರಿಸುವ ಕಾನೂನು ಬಂದವು ಎಂದು ನೆನೆಪು ಮಾಡಿದರು.

ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದರೂ, ಅದನ್ನು ಷರತ್ತಿಗೆ ಒಳಪಟ್ಟು ಬಳಸಬೇಕು. ಮಾಧ್ಯಮಕ್ಕೆ ಸಂಬಂಧಿಸಿದಂತೆ 75 ಕಾನೂನು ಇವೆ. ಈ ಕಾನೂನುಗಳ ಅಧ್ಯಯನ ಆಗದಿದ್ದರೂ, ಕನಿಷ್ಠ ತಿಳಿವಳಿಕೆ ಬೇಕು. ಒಂದೊಂದು ಪ್ರಕರಣವನ್ನು ಅಧ್ಯಯನ ಮಾಡಿ ಜನರಿಗೆ ತಿಳಿಸಬೇಕಿದೆ. ಕಾನೂನು ಜತೆಗೆ ನ್ಯಾಯಾಂಗದ ಅರಿವೂ ಇರಬೇಕು ಎಂದು ತಿಳಿ ಹೇಳಿದರು.

ದೇಶದ್ರೋಹದ ಕಾಯ್ದೆ ನಮ್ಮಲ್ಲಿ ಇನ್ನೂ ಇದೆ. ನ್ಯಾಯಾಂಗ ಉಲ್ಲಂಘನೆ ಕಾಯ್ದೆ ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿಲ್ಲ. ಅಭಿಪ್ರಾಯ, ಭಿನ್ನಾಭಿಪ್ರಾಯ, ಮೌನ, ಪ್ರಶ್ನೆ ಎಲ್ಲವೂ ಈ ಹಕ್ಕಿನ ವ್ಯಾಪ್ತಿಗೆ ಬರಲಿದೆ. ಆದರೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸ್ಥಿರ ನಿಲುವು ಇಲ್ಲ. ಕಾನೂನುಗಳು 75 ವರ್ಷದಲ್ಲಿ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚು ಎಂದು ವಿಷಾದಿಸಿದರು. ಮತ್ತೊಂದು ಆತಂಕಕಾರಿ ಸಂಗತಿ ಎಂದರೆ ಇತ್ತೀಚೆಗೆ ಸಂವಿಧಾನದ ಅಪವ್ಯಾಖ್ಯಾನ ಮಾಡಲಾಗುತ್ತಿದೆ, ಅಪ್ರಸ್ತುತ ಮಾಡಲಾಗುತ್ತಿದೆ, ಇದು ಅಪಾಯಕಾರಿ ಎಂದರು.

ಪತ್ರಕರ್ತರ ಪ್ರಚಲಿತ ಸವಾಲುಗಳು ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಮಾತನಾಡಿ, ಪತ್ರಕರ್ತರು ಹಿಂದೆಂದಿಗಿಂತಲೂ ಹೆಚ್ಚು ವಿಕಾರವಾಗಿ ಚಾಚಿಕೊಳ್ಳುತ್ತಿರುವ ಪ್ರಭುತ್ವದ ಕೋರೆ ಹಲ್ಲುಗಳಿಂದ ಬಚಾವಾಗುವುದು ಹೇಗೆ, ವಿಶ್ವಸಾರ್ಹತೆ ಉಳಿಸಿಕೊಳ್ಳುವುದು ಹೇಗೆ, ಪತ್ರಕರ್ತರಾಗಿ ಮಾನವಂತರಾಗಿ ಬದುಕುವುದು ಹೇಗೆ, ಎನ್ನುವುದು ಪತ್ರಕರ್ತರ ಮುಂದಿರುವ ಪ್ರಸ್ತುತ ಸವಾಲುಗಳು ಎಂದರು.

ಇಂದು ಯಾವ ಪತ್ರಿಕೆ, ಚಾನಲ್‌ಗಳಲ್ಲೂ ನಿವೃತ್ತಿವರೆಗೂ ಕೆಲಸ ಮಾಡುತ್ತೇವೆ ಎನ್ನುವ ವಿಶ್ವಾಸ ಇಲ್ಲ. ಐಟಿ ಕಂಪೆನಿಗಳ ಮಾದರಿಯಲ್ಲೇ ಪತ್ರಕರ್ತರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಉದ್ಯೋಗ ಭದ್ರತೆಯೇ ಇಲ್ಲವಾಗಿ ಏಕಾಏಕಿ ಬೀದಿಗೆ ಬೀಳುತ್ತಿದ್ದೇವೆ ಎಂದರು.

ಅಡ್ವಟೋರಿಯಲ್ ಆದಾಯಕ್ಕಾಗಿ ರಾಜಕಾರಣಿಗಳನ್ನು ಹೊಗಳುವ ಲೇಖನಗಳು ಪ್ರಕಟವಾಗುತ್ತಿವೆ. ಬದಕಲು ಕಷ್ಟ ಎನ್ನುವಷ್ಟು ಸಂಬಳ ಪಡೆದುಕೊಂಡು ಮಾನವಂತರಾಗಿ ಬದುಕುವ ದೊಡ್ಡ ಸವಾಲು ನಮ್ಮ ಮುಂದಿದೆ ಎಂದು ನುಡಿದರು. ಇಷ್ಟೆಲ್ಲದರ ನಂತರವೂ ಪತ್ರಕರ್ತರಾಗಲು ಪೈಪೋಟಿಯಿದೆ. ಆ ಆಕರ್ಷಣೆ ಉಳಿದಿದೆ. ಶಿಕ್ಷಕ ಹಾಗೂ ಪತ್ರಕರ್ತರ ವೃತ್ತಿಗಳು ಇಂದಿಗೂ ಗೌರವ ಉಳಿಸಿಕೊಂಡಿವೆ. ಸಮಾಜ ಅವರ ಮೇಲೆ ನಂಬಿಕೆ ಇರಿಸಿರುವುದು ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದಚಂದ್ರ, ಕೆಯೂಡಬ್ಲ್ಯೂಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ.ಮದನಗೌಡ, ಪ್ರಧಾನ ಕಾರ್ಯದರ್ಶಿ ಮಂಜು ಬನವಾಸೆ ಇದ್ದರು.