ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರಿನಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟಕ್ಕೆ ಗೃಹಸಚಿವ ಡಾ.ಜಿ.ಪರಮೇಶ್ವರ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು.
ಪತ್ರಕರ್ತರಿಗೆ ಬರವಣಿಗೆ ಮೂಲಕ ಸಮಾಜ ಹಾಗೂ ಅನೇಕ ವಿಚಾರ ಬದಲಾಯಿಸುವ ಶಕ್ತಿ ಇದೆ. ಜತೆಗೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳಿಂದ ಸರ್ಕಾರಕ್ಕೆ ಕಿವಿ ಹಿಂಡುವ, ಸಲಹೆ, ಸೂಚನೆ ನೀಡುವ ಕೆಲಸವೂ ಆಗುತ್ತದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಉತ್ತಮ ಲೇಖನಗಳನ್ನು ಬರೆಯಲು ಮುಂದಾಗಬೇಕು ಎಂದರು.
ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದಂತೆ ಮುಂದಿನ ದಿನಗಳಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನವಾಗಿ ಆಚರಿಸಲಾಗುವುದು ಎಂದರು. ಜನವರಿಯಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ತುಮಕೂರಿನಲ್ಲಿ ಆಯೋಜಿಸಲಾಗಿದ್ದು, ರಾಜ್ಯದೆಲ್ಲೆಡೆಯಿಂದ 5 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಆಗಮಿಸಲಿದ್ದಾರೆ. ಹಾಗಾಗಿ, ಸಮ್ಮೇಳನ ಯಶಸ್ಸಿಗೆ ಜಿಲ್ಲಾಡಳಿತ ಹೆಚ್ಚಿನ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಪುರುಷೋತ್ತಮ ಇದ್ದರು. ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಚಿದಾನಂದಗೌಡ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ತುಮಕೂರು ವಿವಿ ಕುಲಪತಿ ಪ್ರೊ.ವೆಂಕಟೇಶ್ವರಲು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಮತ್ತಿತರರು ಇದ್ದರು. ಪಂದ್ಯಾವಳಿ ಆರಂಭಕ್ಕೂ ಮೊದಲು ನಗರಕ್ಕೆ ಆಗಮಿಸಿದ ಕ್ರೀಡಾಜ್ಯೋತಿಯ ಮೆರವಣಿಗೆಗೆ ತುಮಕೂರು ವಿವಿ ಮುಂಭಾಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಕ್ರೀಡಾಜ್ಯೋತಿ ಮೆರವಣಿಗೆ ಬಿ.ಎಚ್.ರಸ್ತೆ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗದಿಂದ ಶಿವಕುಮಾರ ಸ್ವಾಮೀಜಿ ವೃತ್ತದ ಮೂಲಕ ಸಾಗಿ ಕ್ರೀಡಾಕೂಟ ಏರ್ಪಡಿಸಿದ್ದ ಮಹಾತ್ಮಗಾಂಧಿ ಕ್ರೀಡಾಂಗಣ ತಲುಪಿತು. ಜನಪದ ಕಲಾತಂಡಗಳು, ಎನ್ಸಿಸಿ ವಿದ್ಯಾರ್ಥಿಗಳು ಇದ್ದರು.
ಕಬಡ್ಡಿ ಪಂದ್ಯಕ್ಕೆ ವಿ.ಸೋಮಣ್ಣ ಚಾಲನೆ: ಕಬಡ್ಡಿ ಪಂದ್ಯಾವಳಿ ಕೇಂದ್ರ ಸಚಿವ ವಿ.ಸೋಮಣ್ಣ ಚಾಲನೆ ನೀಡಿ ಮಾತನಾಡಿ, ಕ್ರೀಡೆ ಮನುಷ್ಯನ ಉತ್ಸಾಹಕ್ಕೆ, ಉಲ್ಲಾಸಕ್ಕೆ ಹಾಗೂ ನೆಮ್ಮದಿಗೆ ಅತ್ಯುತ್ತಮವಾದ ಸಾಧನ. ನಮ್ಮಲ್ಲಿರುವ ನೋವು ಶಮನ ಮಾಡಲು ಕ್ರೀಡೆ ಸಹಕಾರಿ ಎಂದರು. ಪತ್ರಕರ್ತರು ವರದಿ ಬರೆಯುವಾಗ ಯಾರದೇ ಮುಲಾಜಿಗೆ ಒಳಗಾಗದೆ ಸತ್ಯ ಸಂಗತಿ ತಿಳಿಸುವ ಕೆಲಸ ಮಾಡಬೇಕು. ಸತ್ಯ ಸಂಗತಿ ತಿಳಿಸುವುದರೊಂದಿಗೆ ಮಾಧ್ಯಮದವರಿಂದ ರಾಜ್ಯದ ಹಿತ ಕಾಪಾಡುವ ಕೆಲಸ ಆಗಬೇಕು ಎಂದರು. ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಕ್ರೀಡೆ ಪ್ರತಿಯೊಬ್ಬರ ಜೀವನದಲ್ಲಿ ಅತಿ ಮುಖ್ಯ. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಕ್ರೀಡೂಕೂಟದಲ್ಲಿ ಪಾಲ್ಗೊಂಡಿರುವುದು ತುಂಬಾ ಸಂತಸದ ಸಂಗತಿ ಎಂದರು. ಪತ್ರಕರ್ತರು ಸದಾ ಹಸನ್ಮುಖಿಗಳಾಗಿ ಕಾರ್ಯನಿರ್ವಹಿಸಲು ಇಂತಹ ಕ್ರೀಡಾಕೂಟಗಳ ಆಯೋಜನೆ ಅವಶ್ಯ. ಇಂದು ಸುದ್ದಿ ಮನೆಯಿಂದ ಹೊರ ಬಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಕ್ರೀಡಾಕೂಟದಲ್ಲಿ ಭಾಗವಹಿಸುವುದು ಉತ್ತಮ ಬೆಳವಣಿಗೆ ಎಂದರು.
ಶೀಘ್ರದಲ್ಲೇ ಗ್ರಾಮೀಣ ಪತ್ರಕರ್ತರಿಗೆ ಉಚಿತ ಪ್ರಯಾಣಕ್ಕೆ ಬಸ್ ಪಾಸ್ ಸಹ ದೊರೆಯಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ. ಮಾಧ್ಯಮಗಳಲ್ಲಿ ಸದಾ ಒತ್ತಡದಲ್ಲಿಯೇ ಕೆಲಸ ಮಾಡುವ ಪತ್ರಕರ್ತರಿಗೆ ಕ್ರೀಡಾಕೂಟ ಹಾಗೂ ಸಮ್ಮೇಳನ ನಡೆಸುವ ಮೂಲಕ ಸಂಟಿತರಾಗಿ ಕಾರ್ಯದೊತ್ತಡ ಕಡಿಮೆ ಮಾಡಿಕೊಳ್ಳಲು ಅವಕಾಶವಾಗಲಿದೆ.| ಕೆ.ವಿ.ಪ್ರಭಾಕರ್, ಸಿಎಂ ಮಾಧ್ಯಮ ಸಲಹೆಗಾರ