ಜಿಲ್ಲೆ

ಪತ್ರಕರ್ತರ ಕ್ರೀಡಾ ಕಲರವ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಭಾನುವಾರ ಪತ್ರಕರ್ತರ ಕುಟುಂಬದ ಮಕ್ಕಳ ಕಲರವ ಜೋರಾಗಿತ್ತು. ಮೈದಾನದಲ್ಲಿ ಎಲ್ಲಿ ನೋಡಿದರೂ ಮಕ್ಕಳೇ ಕಾಣಬರುತ್ತಿದ್ದರು. ಕೆಲವರು ಓಡುತ್ತಿದ್ದರು, ಕೆಲವರು ಚೆಂಡು ಎಸೆಯುತ್ತಿದ್ದರು, ಮತ್ತೆ ಕೆಲವರು ಕುಣಿದು ಕುಪ್ಪಳಿಸುತ್ತಿದ್ದರು. ಕೆಲವರಲ್ಲಿ ಗೆಲುವಿನ ನಗೆ, ಇನ್ನು ಕೆಲವರಲ್ಲಿ ಸೋಲಿನ ನಿರಾಸೆೆ…


ಇದು ಜಿಲ್ಲಾ ಪತ್ರಕರ್ತರ ಸಂಘ ಎರಡು ದಿನಗಳ ಕಾಲ ಆಯೋಜಿಸಿರುವ ‘ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ’ದಲ್ಲಿ ಭಾನುವಾರ ಕಂಡುಬಂದ ದೃಶ್ಯಾವಳಿಗಳು.

ನಿತ್ಯವೂ ಶಾಲೆಯಲ್ಲಿ ಪಾಠ ಕೇಳುತ್ತ ನಾಲ್ಕು ಗೋಡೆಗಳ ಮಧ್ಯೆ ಕಲಿಕೆಯಲ್ಲಿ ನಿರತರಾಗುತ್ತಿದ್ದ ಪತ್ರಕರ್ತರ ಮಕ್ಕಳು ಅವರಿಗಾಗಿಯೇ ಆಯೋಜಿಸಿದ್ದ ಕ್ರೀಡಾ ಚಟುವಟಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಬಹುಮಾನ ಗೆದ್ದು ಸಂಭ್ರಮಿಸಿದರು. ಓಟದ ಸ್ಪರ್ಧೆ, ಲೆಮೆನ್ ಆ್ಯಂಡ್ ಸ್ಪೂನ್, ಕಬಡ್ಡಿ, ಕ್ರಿಕೆಟ್, ಶಟಲ್ ಬ್ಯಾಡ್ಮಿಂಟನ್, ಮ್ಯೂಸಿಕಲ್ ಚೇರ್, ಗುಂಡು ಎಸೆತ ಸೇರಿ ಇತರ ಆಟಗಳನ್ನು ಆಡಿದರು. ಮಕ್ಕಳ ಜತೆಗೆ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರು ಕ್ರೀಡಾಕೂಟದ ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.


ಕ್ರೀಡಾಕೂಟಕ್ಕೆ ಚಾಲನೆ: ಅಥ್ಲೀಟ್ ಧನುಷಾ ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಪತ್ರಕರ್ತರು ನನ್ನ ಪ್ರತಿಭೆ ಗುರುತಿಸಿ ಮತ್ತಷ್ಟು ಸಾಧನೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಅವರು ನಿತ್ಯವೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳ ನಂತರ ಕ್ರೀಡಾಕೂಟಗಳು ನಡೆಯುತ್ತಿವೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಅವಶ್ಯ. ಜಾತಿ, ಮತ, ಹಣ, ವೃತ್ತಿ ತಾರತಮ್ಯವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆಯನ್ನು ಕ್ರೀಡೆ ಬೆಳೆಸುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಒಂದು ಗಂಟೆ ಆಟೋಟದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.


ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಮಾತನಾಡಿ, ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗವಾಗಬೇಕು. ಯಾರು ಉತ್ತಮ ದೈಹಿಕ ಸಾಮರ್ಥ್ಯ ಇಟ್ಟುಕೊಂಡಿರುತ್ತಾರೆಯೋ ಅವರ ಆರೋಗ್ಯ ಚೆನ್ನಾಗಿರುತ್ತದೆ. ಜ್ಞಾನ ಸಂಪಾದನೆಗೆ ಚಟುವಟಿಕೆಯಿಂದ ಇರುವುದು ಕೂಡ ಅಗತ್ಯವಾಗುತ್ತದೆ. ಇದರಿಂದ ಜೀವನದಲ್ಲಿ ಯಶಸ್ಸನ್ನೂ ಕಾಣಬಹುದು ಎಂದು ತಿಳಿಸಿದರು.