ಜಿಲ್ಲೆ

ಪತ್ನಿಯನ್ನು ಕೊಂದು, ಪತಿ ಆತ್ಮಹತ್ಯೆ

ವಿಜಯಪುರ: ಪತ್ನಿಯ ಶೀಲದ ಮೇಲೆ ಶಂಕಿಸಿ ಸೀರೆಯಿಂದ ಕತ್ತು ಬಿಗಿದು, ಉಸಿರುಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಿ ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದಲ್ಲಿ ನಡೆದಿದೆ. 48ವರ್ಷದ ಶಿವಪ್ಪ ಮನಗೂಳಿ ಎಂಬಾತನೇ ಪತ್ನಿಯನ್ನು ಕೊಲೆ ಮಾಡಿದ ಪಾಪಿ ಪತಿರಾಯನಾಗಿದ್ದಾನೆ. 38 ವರ್ಷದ ಹನುಮವ್ವ ಮನಗೂಳಿ ಕೊಲೆಯಾದ ದುರ್ದೈವಿ ಪತ್ನಿ. ಪತ್ನಿಯನ್ನು ನಂಬಿಸಿ ಬೇನಾಳ ಗ್ರಾಮದ ಜಮೀನಿಗೆ ಕರೆದೊಯ್ದ ಪತಿ ಶಿವಪ್ಪ ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ತಾನು ಜಮೀನಿನಲ್ಲಿನ ಬೇವಿನ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಕಳೆದ ಕೆಲ ವರ್ಷಗಳಿಂದ ಪತಿ ಪತ್ನಿಯ ನಡುವೆ ಸಾಮರಸ್ಯ ಹದಗೆಟ್ಟಿತ್ತು. ಇನ್ನು ಪತಿ ಶಿವಪ್ಪ ಪತ್ನಿ ಹನುಮವ್ವನ ಶೀಲದ ಮೇಲೆ ಶಂಕೆ ಪಡುತ್ತಿದ್ದ. ಇದರಿಂದ ಇಬ್ಬರ ನಡುವೆ ದಿನನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಆದ್ರೆ ಗಂಡನ ಸಂಶಯ ದಿನೇ ದಿನೇ ವಿಪರಿತವಾಗಿತ್ತು. ಇಂದು ಪತ್ನಿಯನ್ನ ನಂಬಿಸಿ ಜಮೀನಿಗೆ ಕರೆದೊಯ್ದು ಕೊಲೆ ಮಾಡಿದ್ದಾನೆ. ಬಳಿಕ ಹೆದರಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ನಿಡಗುಂದಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ ಎಂದು ವಿಜಯಪುರ ಎಸ್ ಪಿ ಆನಂದಕುಮಾರ ತಿಳಿಸಿದ್ದಾರೆ.