ಹಾಸನ: ಮಾನಸಿಕವಾಗಿ ಕಿರುಕುಳ ಕೊಡುವ ಮೂಲಕ ನನ್ನ ಸಾವಿಗೆ ನನ್ನ ಹೆಂಡತಿ ಕಾರಣಳಾಗಿದ್ದಾಳೆ ಎಂದು ಡೆತ್ ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ ನಗರದ ಶಂಕರಿಪುರಂ ನಿವಾಸಿ ಗುರುದತ್ತ ಕುಮಾರ್ (43) ಆತ್ಮಹತ್ಯೆಗೆ ಶರಣಾದ ಪತಿ.
ಗುರುದತ್ತ ಕುಮಾರ್ ಯಾವುದೇ ಕೆಲಸ ಮಾಡದೆ, ಅಲ್ಲಿ ಇಲ್ಲಿ ತಿರುಗಾಡಿಕೊಂಡು, ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದರು. ಇವರ ಹೆಂಡತಿ ಕಲ್ಪನಾ ಅವರು ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಸಾರದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೆಂಡತಿಯೇ ನಿರ್ವಹಿಸುತ್ತಿದ್ದರು. ದಂಪತಿಗೆ 8ನೇ ತರಗತಿಯಲ್ಲಿ ಓದುತ್ತಿರುವ ಮಗಳು ಇದ್ದಾಳೆ. ಅ.12ರಂದು ಗುರುದತ್ತ ಕುಮಾರ್ ಮಧ್ಯಾಹ್ನ 1.30ರ ಸಮಯದಲ್ಲಿ ಮನೆಯ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಕಲ್ಪನಾ ಅವರು ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು.
ಈ ನಡುವೆ ಅ.16ರಂದು ಮನೆಯ ಟಿ.ವಿ ಸ್ಟಾೃಂಡ್ ಹತ್ತಿರ ಚೀಟಿಯೊಂದು ಮೃತರ ತಂದೆ ಜವರೇಗೌಡ ಅವರಿಗೆ ಸಿಕ್ಕಿದೆ. ಅದನ್ನು ನೋಡಲಾಗಿ ಮಗ ಗುರುದತ್ತ ಕುಮಾರ ಅವರ ಕೈ ಬರಹದಂತಿರುವ ಚೀಟಿಯಾಗಿದ್ದು, ಚೀಟಿಯಲ್ಲಿ ‘ನನಗೆ ಯಾವ ಜವಾಬ್ದಾರಿಯನ್ನು ಕೊಡದೇ ಹೆಂಡತಿ ಕಲ್ಪನಾಗೆ ಎಲ್ಲ ಜವಾಬ್ದಾರಿ ಕೊಡಲಾಗಿದೆ. ಮನೆಯ ಬಾಡಿಗೆಯನ್ನು ನನ್ನ ಹೆಂಡತಿಗೆ ಕೊಟ್ಟಿರುತ್ತಾರೆ. ನನಗೆ ಮಾನಸಿಕವಾಗಿ ಕಿರುಕುಳ ಕೊಟ್ಟಿರುತ್ತಾರೆ. ನನ್ನ ಸಾವಿಗೆ ನನ್ನ ಹೆಂಡತಿ ಕಲ್ಪನಾಳೆ ಕಾರಣ,’ ಎಂದು ಚೀಟಿಯಲ್ಲಿ ಬರೆಯಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ತಂದೆ ಜವರೇಗೌಡ ಅವರು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.