ಜಿಲ್ಲೆ

ಪತ್ನಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಮರಳಿದವ ದಂಗಾದ

ಸುಭಾಸ ಹೆಗಡೆ ಧೂಪದಹೊಂಡ

ವಿಜಯವಾಣಿ ಸುದ್ದಿಜಾಲ ಶಿರಸಿ
ತಾಲೂಕಿನ ಆರೆಕೊಪ್ಪದಲ್ಲಿರುವ ಅಬ್ದುಲ್ ಬಶೀರ ಎಂಬುವರ ಮನೆಯಲ್ಲಿ ಕಳ್ಳರು ಅಂದಾಜು ಒಂದು ಲಕ್ಷಕ್ಕೂ ಹೆಚ್ಚಿನ ನಗದು ಹಾಗೂ ಒಂದು ಬಂಗಾರದ ಸರವನ್ನು ಕಳ್ಳತನ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಅಬ್ದುಲ್ ಬಶೀರವರ ಹೆಂಡತಿಗೆ ಅನಾರೋಗ್ಯ ಕಾಡಿದ್ದರಿಂದ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅವರು ನಿಧನರಾಗಿದ್ದರಿಂದ ಅಬ್ದುಲ್ ತಮ್ಮ ಹೆಂಡತಿಯ ಅಂತ್ಯಕ್ರಿಯೆಯನ್ನು ಶಿರಸಿಯಲ್ಲಿರುವ ಮತ್ತೊಂದು ಮನೆಯಲ್ಲಿ ವಿಧಿವಿಧಾನ ಮುಗಿಸಿ ಶಿರಸಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮುಗಿಸಿದ್ದರು. ಇದೇ ವೇಳೆ ಮನೆಯ ಹಂಚನ್ನು ತೆಗೆದು ಒಳಗೆ ಇಳಿದಿರುವ ಕಳ್ಳರು ಮೂರು ಗೊದ್ರೆಜ್ ಕಪಾಟ್ ಒಡೆದು ನಗದು ಮತ್ತು ಬಂಗಾರದ ಸರವನ್ನು ಕದ್ದೊಯ್ದಿದ್ದಾರೆ. ಅಬ್ದುಲ್ ತಮ್ಮ ಮಗನೊಂದಿಗೆ ಆರೆಕೊಪ್ಪದ ಮನೆಗೆ ಬಂದರೆ ಮನೆಯಲ್ಲಿ ಕಳ್ಳತನ ನಡೆದಿರುವುದು ಕಂಡು ಬಂತು. ಪೋಲಿಸರು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಹೆಚ್ಚಿನ ತನಿಖೆಗಾಗಿ ಶ್ವಾನದಳವನ್ನು ಕರೆಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.