ಕಲಬುರಗಿ: ಪತ್ನಿಗೆ ಕೌಟುಂಬಿಕ ಹಿಂಸೆ ನೀಡಿ, ಚಾಕುವಿನಿಂದ ಹೊಡೆದು ಸಾಯಿಸಲು ಪ್ರಯತ್ನಿಸಿದ ಪತಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ೫೦ ಸಾವಿರ ರೂ. ದಂಡ ವಿಧಿಸಿ ೫ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಆದೇಶಿಸಿದ್ದಾರೆ. ನಗರದ ರಾಮನಗರದ ಅನೀಲಕುಮಾರ ಬಿ. ಶಿಕ್ಷೆಗೊಳಗಾದ ಅಪರಾಧಿ. ೨೦೧೬ರಲ್ಲಿ ಮನೆಯಲ್ಲಿ ಹೆಂಡತಿಗೆ ಸರಿಯಾಗಿ ಕೆಲಸ ಮಾಡಲು ಬರಲ್ಲ ಎಂದು ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಾನೆ. ಗಣೇಶ ನಗರದಲ್ಲಿ ಬಾಡಿಗೆಯಲ್ಲಿದ್ದ ದಂಪತಿಯೂ ಬಾಡಿಗೆ ಕೊಡದಕ್ಕೆ ನೊಂದ ಮಹಿಳೆಯ ತಾಯಿಯ ರಾಮನಗರದ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಮಹಿಳೆಯ ತಾಯಿ ಬೆಂಗಳೂರಿಗೆ ಹೋಗಿದ್ದಾಗ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ಬೈದು, ಕುತ್ತಿಗೆಗೆ ಚಾಕುವಿನಿಂದ ಹೊಡೆದು ಕೊಲೆಗೆ ಯತ್ನಿಸಿದ್ದ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖಾಧಿಕಾರಿ ಪಿಎಸ್‌ಐ ಚಂದ್ರಶೇಖರ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಶಿಕ್ಷೆ ವಿಧಿಸಿ, ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಹಯ್ಯಾಳಪ್ಪ ಬಳಬಟ್ಟಿ ವಾದಿಸಿದ್ದರು.