ಜಿಲ್ಲೆ

ಪತ್ನಿ ಮೇಲಿನ ಬೇಸರಕ್ಕೆ ಕೊಲೆ ; ಕತ್ತು ಹಿಸುಕಿ ಕೊಂದು ಹೃದಯಾಘಾತ ನಾಟಕವಾಡಿದ್ದ ಪತಿ; ಪತ್ನಿ ಬಗ್ಗೆ ಜಿಗುಪ್ಸೆಯೇ ಕಾರಣ!

ನೆಲಮಂಗಲ: ತಾಲೂಕಿನ ಅರಿಶಿನಕುಂಟೆ ಗೆಜ್ಜಗದಹಳ್ಳಿ ಸರ್ಕಲ್ ಮನೆಯೊಂದರಲ್ಲಿ ಅನುಮಾನಾಸ್ಪದವಾಗಿ ನವವಿವಾಹಿತೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಪೊಲೀಸರ ಅತಿಥಿಯಾಗಿದ್ದಾನೆ. ಪತಿಯೇ ಪತ್ನಿಯನ್ನು ಕೊಲೆ ಮಾಡಿ ಹೃದಯಾಘಾತದ ನಾಟಕವಾಡಿದ್ದ ಸತ್ಯ ಬೆಳಕಿಗೆ ಬಂದಿದೆ.

ಮೂಲತಃ ಮಂಡ್ಯ ಜಿಲ್ಲೆ ಚೌಕನಹಳ್ಳಿ ನಿವಾಸಿ ರಾಕೇಶ್ (24) (ಬೋರಶೆಟ್ಟಿ) ಬಂಧಿತ. ಬೆಂಗಳೂರು ನಾಗದೇವನಹಳ್ಳಿ ನಿವಾಸಿ ಎಸ್.ಪಿ.ರಮ್ಯಾ (22) ಮೃತೆ.

ಇವರದ್ದು ಪ್ರೇಮವಿವಾಹ: ರಾಕೇಶ್-ರಮ್ಯಾ ಮನೆಯವರ ವಿರೋಧದ ನಡುವೆಯೂ 2 ಎರಡು ವರ್ಷದ ಹಿಂದೆ ಪ್ರೇಮ ವಿವಾಹವಾಗಿದ್ದರು. ಶುಕ್ರವಾರ ಬೆಳಗಿನ ಜಾವ ಪತ್ನಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾಗಿ ರಾಕೇಶ್ ಮಾಹಿತಿ ನೀಡಿದ್ದ. ಆದರೆ, ರಮ್ಯಾ ಕುತ್ತಿಗೆ, ಹಣೆ ಭಾಗದಲ್ಲಿನ ಗಾಯದ ಕಲೆ ಗಮನಿಸಿದ್ದ ಪಾಲಕರು ನಗರ ಠಾಣೆಯಲ್ಲಿ ರಾಕೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪಾಲಕರಿಗೆ ಒಪ್ಪಿಸಿದ್ದ ಪೊಲೀಸರು ರಾಕೇಶ್‌ನನ್ನು ವಿಚಾರಣೆ ನಡೆಸಿದ್ದರು. ಪ್ರೀತಿಸಿ ಮದುವೆಯಾಗಿದ್ದರೂ ಪತ್ನಿ ಮೇಲೆ ಜಿಗುಪ್ಸೆಯಿಂದ ಕತ್ತುಹಿಸುಕಿ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ.

ಪ್ರೇಮಾಂಕರವಾಗಿದ್ದು ಹೇಗೆ: ಬೆಂಗಳೂರಿನ ಮಲ್ಲೇಶ್ವರಂನ ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ಲೈಬ್ರರಿ ಸೈನ್ಸ್ ಅಭ್ಯಾಸ ಮಾಡುತ್ತಿದ್ದ ರಮ್ಯಾ ಅರಿಶಿನಕುಂಟೆಯಲ್ಲಿ ವಾಸವಿದ್ದ ಹಿರಿಯ ಸಹೋದರಿ ಮನೆಗೆ ಬಂದಿದ್ದಳು. ಇಲ್ಲೇ ಆರೋಪಿ ಸಹೋದರಿ ಮನೆಯೂ ಇತ್ತು. ಯಶವಂತಪುರದ ಕಬ್ಬಿಣ ಕಾರ್ಖಾನೆಗೆ ಕೆಲಸ ಹೋಗುತ್ತಿದ್ದ ರಾಕೇಶ್ ಪರಿಚಯವಾಗಿ, ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ಪ್ರತ್ಯೇಕ ವಾಸ: ರಾಕೇಶ್‌ನೊಂದಿಗಿನ ಮದುವೆಗೆ ರಮ್ಯಾ ಮನೆಯವರು ವಿರೋಧಿಸಿದ್ದರು. ರಾಕೇಶ್ ಮನೆಯವರಿಂದಲೂ ನಿರಾಕರಿಸಿದ್ದರು. ರಿಜಿಸ್ಟರ್ ಮದುವೆಯಾಗಿ ದಂಪತಿ ಪ್ರತ್ಯೇಕ ವಾಸವಿದ್ದರು.

ಅರಂಭದಲ್ಲೇ ಮನಸ್ತಾಪ: ಆರಂಭದಲ್ಲಿ ಬೆಂಗಳೂರಿನ ನಾಯಂಡಹಳ್ಳಿ ಬಳಿಕ ಕಮಲಾನಗರದಲ್ಲಿ ಬಾಡಿಗೆ ಮನೆಯಲ್ಲಿದ್ದ ದಂಪತಿ ಆಗಾಗ ಜಗಳವಾಡುತ್ತಿದ್ದರು. 2 ತಿಂಗಳು ತವರು ಮನೆಯಲ್ಲಿದ್ದ ರಮ್ಯಾಳನ್ನು ಮತ್ತೆ ಮನವೊಲಿಸಿ ಕರೆತಂದಿದ್ದ ರಾಕೇಶ್, ಸಂಬಂಧಿಕರ ಸಲಹೆಯಂತೆ ಅರಿಶಿನಕುಂಟೆಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದ.

ಕೆಲ ದಿನಗಳ ಬಳಿಕ ಮತ್ತೆ ಮನಸ್ತಾಪ ಉಂಟಾಗಿತ್ತು. ಇತ್ತೀಚೆಗೆ ಮನೆಗೆ ಕರೆದುಕೊಂಡು ಬರುತ್ತಿದ್ದ ಸ್ನೇಹಿತರ ಮುಂದೆ ರಮ್ಯಾಳನ್ನು ಅವಮಾನಿಸುತ್ತಿದ್ದ. ತವರು ಮನೆಯಿಂದ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದ ಎಂದು ರಮ್ಯಾ ಪಾಲಕರು ದೂರಿದ್ದಾರೆ.

ರಮ್ಯಾಳಿಗಾಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಖರೀದಿಸಿದ್ದೆ. ಜೂನ್ 4 ರಂದು 2ನೇ ವಿವಾಹ ವಾರ್ಷಿಕೋತ್ಸವದಲ್ಲಿ ಉಡುಗೊರೆ ಕೊಡುವವನಿದ್ದೆ, ಮತ್ತೆ ಇಬ್ಬರಿಗೂ ಶಾಸ್ತ್ರೋಕ್ತವಾಗಿ ಆರತಕ್ಷತೆ ಮಾಡುವ ಯೋಜನೆ ಇತ್ತು. ಅಷ್ಟರೊಳಗೆ ರಮ್ಯಾ ಇಹಲೋಕ ತ್ಯಜಿಸಿದ್ದಾಳೆ ಎಂದು ರಮ್ಯಾ ಹಿರಿಯ ಸಹೋದರ ಸೋಮಶೇಖರ್ ಅಳಲು ತೋಡಿಕೊಂಡರು.

ಕೊಲೆಗೂ ಮುನ್ನ ಎಲ್ಲರಿಗೂ ಕರೆ: ಕೊಲೆಗೂ ಮುನ್ನ ಗುರುವಾರ ರಾತ್ರಿ ರಮ್ಯಾಳ ತಂದೆ-ತಾಯಿ, ಅಕ್ಕಭಾವ, ತನ್ನ ಪಾಲಕರಿಗೂ ಕರೆ ಮಾಡಿಸಿದ್ದ ರಾಕೇಶ್ ಉಬಯಕುಶಲೋಪರಿ ವಿಚಾರಿಸಿದ್ದ. ಎಲ್ಲರ ಬಳಿಯೂ ಸಂತೋಷದಿಂದ ಮಾತನಾಡಿದ್ದ ಎನ್ನಲಾಗಿದೆ.