ಜಿಲ್ಲೆ

ಪತ್ನಿ, ಮಾವನ ಮನೆಯವರೇ ಆರೋಪಿಗಳು

ಯಲ್ಲಾಪುರ: ತಾಲೂಕಿನ ಚಿಕ್ಕಮಾವಳ್ಳಿಯ ರಾಜೇಶ ನಾಯ್ಕ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮೃತನ ಪತ್ನಿ ಹಾಗೂ ಆಕೆಯ ಮನೆಯ ನಾಲ್ವರನ್ನು ಬಂಧಿಸಿದ್ದಾರೆ.
ಮೃತ ರಾಜೇಶ ನಾಯ್ಕ ಅವರ ಪತ್ನಿ ಶ್ವೇತಾ ನಾಯ್ಕ, ಮಾವ ದೀಪಕ ಮರಾಠಿ, ಅತ್ತೆ ಯಮುನಾ ಮರಾಠಿ ಹಾಗೂ ಭಾವ ಗಂಗಾಧರ ಮರಾಠಿ ಬಂಧಿತರು.
ರಾಜೇಶ ನಾಯ್ಕ ಜೂನ್ 10ರಂದು ಮಾವನ ಮನೆಯಲ್ಲಿ ಆಸ್ತಿ ವಿಚಾರವಾಗಿ ಹೆಂಡತಿ ಹಾಗೂ ಮಾವನ ಮನೆಯವರೊಂದಿಗೆ ಜಗಳವಾಡಿದ್ದ. ಆಗ ಕೋಪಗೊಂಡ ಮಾವನ ಮನೆಯವರು ಗುದ್ದಲಿ ಹಾಗೂ ಕಟ್ಟಿಗೆಯಿಂದ ಹಲ್ಲೆ ಮಾಡಿ ಆತನನ್ನು ಕೊಲೆ ಮಾಡಿದ್ದಾರೆ. ನಂತರ ಸಾಕ್ಷ್ಯ ನಾಶ ಮಾಡಲು ಆತನ ಶವವನ್ನು ಸುಟ್ಟು ಹಾಕಿ, ಮೂಳೆಗಳನ್ನು ಕಾಡಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದರು. ಆತನ ಬೈಕ್, ಚಪ್ಪಲಿಗಳನ್ನು ದೇಹಳ್ಳಿ ಸಮೀಪದ ಕಾಡಿನಲ್ಲಿ ಎಸೆದು, ಅವನನ್ನು ಯಾವುದೋ ಪ್ರಾಣಿ ತಿಂದಿರಬಹುದೆಂದು ಹೇಳಿ ನಂಬಿಸಲು ಯತ್ನಿಸಿದ್ದರು. ರಾಜೇಶ ಕುಟುಂಬದವರು ಕೇಳಿದಾಗ ಆತ ಕಾಣೆಯಾಗಿದ್ದಾನೆ ಎಂದು ಹೇಳಿದ್ದರು.
ಸಂಶಯಗೊಂಡ ರಾಜೇಶ ಕುಟುಂಬದವರು ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಎರಡು ತಂಡಗಳ ಮೂಲಕ ತನಿಖೆ ನಡೆಸಿದ್ದು, ಮೃತನ ಪತ್ನಿ, ಅತ್ತೆ, ಮಾವ, ಭಾವನ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಎಸ್​ಪಿ ಶಿವಪ್ರಕಾಶ ದೇವರಾಜು, ಎಎಸ್​ಪಿ ಬದರಿನಾಥ, ಡಿಎಸ್​ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಪಿಐ ಸುರೇಶ ಯಳ್ಳೂರು, ಪಿಎಸ್​ಐಗಳಾದ ಮಂಜುನಾಥ ಗೌಡರ್, ಮುಷಾಹಿದ್ ಅಹ್ಮದ್, ಎಎಸ್​ಐ ಮಂಜುನಾಥ ಮನ್ನಂಗಿ, ಸಿಬ್ಬಂದಿ ಮಹಮ್ಮದ್ ಶಫಿ, ಬಸವರಾಜ ಹಗರಿ, ಗಜಾನನ ನಾಯ್ಕ, ನಾಗಪ್ಪ ಲಮಾಣಿ, ವಿನೋದ ರೆಡ್ಡಿ, ಬಸವರಾಜ ಡಿ.ಕೆ, ಗಿರೀಶ ಲಮಾಣಿ, ಕರಿಯಪ್ಪ, ಮಹಾಂತೇಶ ಕಟಪಟ್ಟಿ, ಮುತ್ತುರಾಜ, ನೀಲನ್ ಮೋರೆ, ಶೋಭಾ ನಾಯ್ಕ, ದೀಪಾ ಪೈ, ಶಿಲ್ಪಾ ಗೌಡ, ಸುಜಾತಾ ಗಾಂವ್ಕರ, ಸುಧಾ ಗೌಡ, ಕೃಷ್ಣ ಮಾತ್ರೋಜಿ, ಕಾರವಾರದ ಟೆಕ್ನಿಕಲ್ ಸೆಲ್ ವಿಭಾಗದ ಸಿಬ್ಬಂದಿ ಸುಧೀರ ಮಡಿವಾಳ, ಉದಯ ಗುನಗಾ, ರಮೇಶ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.