ಬಳ್ಳಾರಿ : ಮದ್ಯ ಸೇವನೆಗೆ ಹಣ ನೀಡಿಲ್ಲವೆಂದು ಕೊಡಲಿಯಿಂದ ಕೊಲೆ ಮಾಡಿದ್ದ ಆರೋಪಿ ಎಸ್.ಜಡೆಪ್ಪನಿಗೆ ಸತ್ರ ನ್ಯಾಯಾಧೀಶ ಬಿ.ಜಿ.ಪ್ರಮೋದ್ ಅವರು ಕಠಿಣ ಜೀವಾವಧಿ ಶಿಕ್ಷೆಯೊಂದಿಗೆ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತಾಲೂಕಿನ ಹಳೆಮೋಕ ಗ್ರಾಮದ ತಿಮ್ಮಪ್ಪನ ಗುಡಿ ಬಳಿ ನಿವಾಸಿ ಆರೋಪಿ ಎಸ್.ಜಡೆಪ್ಪ, ಮದ್ಯ ವ್ಯಸನಿಯಾಗಿದ್ದು, ಮದ್ಯ ಸೇವಿಸಲು ತನ್ನ ಪತ್ನಿ ರಂಗಮ್ಮಳಿಗೆ ಹಣ ಕೇಳಿದ್ದಾನೆ. ಕೊಡದ ಹಿನ್ನೆಲೆಯಲ್ಲಿ ವಿನಾಕಾರಣ ಆಕೆಯ ಶೀಲ ಶಂಕಿಸಿ, ಹೊಡೆಬಡೆ ಮಾಡುತ್ತಿದ್ದ. 2022 ಜು.5 ರಂದು ಮದ್ಯ ಸೇವಿಸಲು ಹಣ ನೀಡುವಂತೆ ಪತ್ನಿ ರಂಗಮ್ಮಳನ್ನು ಪೀಡಿಸಿದ್ದಾನೆ. ಹಣ ಇಲ್ಲ ಎಂದಿದ್ದಕ್ಕೆ ಆಕೆಯ ಶೀಲ ಶಂಕಿಸಿದ್ದಾನೆ. ಯಾರೊಂದಿಗೊ ಅಕ್ರಮ ಸಂಬಂಧ ಹೊಂದಿದ್ದಾಳೆ, ಕತ್ತೆಸೂಳೆ ಎಂದೆಲ್ಲ ಬಾಯಿಗೆ ಬಂದಂತೆ ಬೈಯ್ದು, ಏಕಾಏಕಿ ಕೊಡಲಿಯಿಂದ ಮನಸೋ ಇಚ್ಛೆಯಿಂದ ರಂಗಮ್ಮಳ ಎಡಕಿವಿ ಹಿಂದೆ, ಎಡಕಣ್ಣು ಉಬ್ಬಿನ ಪಕ್ಕದಲ್ಲಿ, ಬಲಕತ್ತಿಗೆ ಒಡೆದಿದ್ದಾನೆ. ಈ ವೇಳೆ ಆರೋಪಿ ಜಡೆಪ್ಪ, ಪುನಃ ರಂಗಮ್ಮಳಿಗೆ ಕೊಡಲಿಯಿಂದ ಹೊಡೆದಾಗ ಭಾರಿ ರಕ್ತಗಾಯವಾಗಿ ಸ್ಥಳದಲ್ಲೇ ಕೊಲೆಗೀಡಾಗಿದ್ದಾಳೆ. ಆರೋಪಿ ಜಡೆಪ್ಪ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಕ್ಷ್ಯಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಿಡಿಹಳ್ಳಿ ಠಾಣೆ ಸಿಪಿಐ ಉಮೇಶ್ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಸತ್ರ ನ್ಯಾಯಾಧೀಶ ಬಿ.ಜಿ.ಪ್ರಮೋದ, ಆರೋಪಿ ಎಸ್.ಜಡೆಪ್ಪನಿಗೆ ಕಠಿಣ ಜೀವಾವಧಿ ಸಜೆ ಮತ್ತು 10 ಸಾವಿರ ರೂ ದಂಡ ತಪ್ಪಿದಲ್ಲಿ ಎರಡು ತಿಂಗಳು ಸಾದಾ ಸಜೆ ಅನುಭವಿಸಬೇಕೆಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಲಕ್ಷ್ಮಿದೇವಿ ಪಾಟೀಲ್ ವಾದ ಮಂಡಿಸಿದ್ದಾರೆ.