ದಾವಣಗೆರೆ: ಜಿಲ್ಲೆಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳನ್ನು ಸಿಇಐಆರ್ ಪೋರ್ಟ್‌ಲ್ ಸಹಾಯದಿಂದ ಪತ್ತೆಹಚ್ಚುವ ಮೂಲಕ ಶುಕ್ರವಾರ ವಾರಸುದಾರರಿಗೆ ಹಿಂತಿರುಗಿಸಲಾಯಿತು.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಅವರು ಸುಮಾರು 25 ಲಕ್ಷ ರೂ. ಮೌಲ್ಯದ 206 ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು.
ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಸಿಇಐಆರ್ ಪೋರ್ಟ್‌ಲ್‌ನಲ್ಲಿ ವಾರಸುದಾರರ ವಿವರ ನಮೂದು ಮಾಡಿ ಮೊಬೈಲ್ ಐಎಂಇಐ ನಂಬರನ್ನು ಬ್ಲಾಕ್ ಮಾಡುವ ಮೂಲಕ ವಿವಿಧ ಪೊಲೀಸ್ ಠಾಣೆಗಳಲ್ಲಿ ಪತ್ತೆ ಮಾಡಲಾಗಿತ್ತು.
2023ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಈ ರೀತಿ ಒಟ್ಟು 3880 ಮೊಬೈಲ್ ಬ್ಲಾಕ್ ಮಾಡಲಾಗಿದ್ದು, ಅದರಲ್ಲಿ 880 ಮೊಬೈಲ್ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.
ಕಳುವಾದ ಮೊಬೈಲ್ ಫೋನ್‌ಗಳನ್ನು ವಾರಸುದಾರರು ಕೆಎಸ್‌ಪಿ ಮೊಬೈಲ್ ಆ್ಯಪ್ ಮೂಲಕ ದೂರು ದಾಖಲಿಸಿ, ದೂರಿನ ಸ್ವೀಕೃತಿ ಪ್ರತಿ ಡೌನ್‌ಲೋಡ್ ಮಾಡಿಕೊಂಡು, ನಂತರ ಸಿಇಐಆರ್ ಪೋರ್ಟ್‌ಲ್ ಗೆ ಭೇಟಿ ನೀಡಿ ಕೆಎಸ್‌ಪಿ ಮೊಬೈಲ್ ಮೂಲಕ ಡೌನ್‌ಲೋಡ್ ಮಾಡಿಕೊಂಡ ದೂರಿನ ಸ್ವೀಕೃತಿ ಪ್ರತಿ ಹಾಗೂ ಆಧಾರ್ ಇತರೆ ಗುರುತಿನ ಚೀಟಿ ಅಪ್‌ಲೋಡ್ ಮಾಡಿ ಮೊಬೈಲ್ ಬ್ಲಾಕ್ ಮಾಡುವ ವಿಧಾನ ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಎಎಸ್‌ಪಿ ಜಿ. ಮಂಜುನಾಥ್, ಸಿಇಎನ್ ಪೊಲೀಸ್ ನಿರೀಕ್ಷಕ ಪಿ. ಪ್ರಸಾದ್, ಪೊಲೀಸ್ ಸಿಬ್ಬಂದಿ ಹಾಗೂ ಮೊಬೈಲ್ ಮಾಲೀಕರಿದ್ದರು.