ಜಿಲ್ಲೆ

ಪತಿಯಿಂದಲೇ ಪತ್ನಿಯ ಕೊಲೆ

ಚಾಮರಾಜನಗರ: ಸಂಸಾರದ ಕಲಹವನ್ನು ಬಗೆಹರಿಸಿಕೊಳ್ಳಲು ಪೊಲೀಸ್ ಠಾಣೆಗೆ ಬಂದಿದ್ದ ಪತ್ನಿಯ ಮೇಲೆ ಪತಿಯೇ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

ನಗರದ ಸೋಮವಾರಪೇಟೆ ನಿವಾಸಿ ಗಿರೀಶ್ (34) ಎಂಬಾತ ತನ್ನ ಪತ್ನಿಯಾದ ವಿದ್ಯಾ(30) ಎಂಬುವವರ ಮೇಲೆ ಮಂಗಳವಾರ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ತೀವ್ರವಾದ ಗಾಯಗಳಿಂದ ಆಕೆ ಮೃತಪಟ್ಟಿದ್ದಾಳೆ. ಆರೋಪಿ ಗಿರೀಶ್ ಮತ್ತು ಮೃತ ವಿದ್ಯಾ ದಂಪತಿಗಳಿಗೆ ಒಂದು ಗಂಡು ಮತ್ತು ಹೆಣ್ಣು ಮಗುವಿದ್ದು, ಸಾಕಷ್ಟು ದಿನಗಳ ಹಿಂದೆ ವಿದ್ಯಾ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಇಟ್ಟುಕೊಂಡು ಮನೆಬಿಟ್ಟು ಹೊರಟು ಹೋಗಿದ್ದರು. ಈ ವೇಳೆ ಆಕೆಯನ್ನು ಹುಡುಕಿಕೊಂಡು ಬರಲಾಗಿದ್ದು, ಮಹಿಳಾ ಸಂತ್ವಾನ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಈ ವಿಚಾರವಾಗಿ ಗಿರೀಶ್ ಮಾನಸಿಕವಾಗಿ ಸಾಕಷ್ಟು ನೊಂದುಕೊಂಡಿದ್ದರು. ದಂಪತಿಗಳಿಬ್ಬರೂ ಮಂಗಳವಾರ ಪಟ್ಟಣ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದು, ಗಂಡ-ಹೆಂಡತಿಗೆ ಬುದ್ಧಿವಾದ ಹೇಳಿ ಪೊಲೀಸರು ಕಳುಹಿಸಿಕೊಟ್ಟಿದ್ದರು.

ಆದರೇ ಪೊಲೀಸ್ ಠಾಣೆಯಿಂದ ಬಂದ ಬಳಿಕ ಆರೋಪಿ ಗಿರೀಶ್ ಮಚ್ಚಿನಿಂದ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ವಿದ್ಯಾ ಮೃತಪಟ್ಟರು. ಬಳಿಕ ಪೊಲೀಸರು ಮೃತದೇಹವನ್ನು ಸಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಆರೋಪಿ ಗಿರೀಶ್ ಪರಾರಿಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪೊಲೀಸ್ ಠಾಣೆ ಸಮೀಪವೆ ಕೊಲೆ:

ನಗರದ ಪಟ್ಟಣ ಪೊಲೀಸ್ ಠಾಣೆಯ ಸಮೀಪದಲ್ಲೇ ಇರುವ ಕಾನೂನು ಕಾಲೇಜು ಮುಂಭಾಗ ವಿದ್ಯಾ ಅವರ ಮೇಲೆ ಗಿರೀಶ್ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹೆಂಡತಿಯ ವಿಚಾರದಿಂದ ಮಾನಸಿಕವಾಗಿ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದ ಗಿರೀಶ್, ಪೊಲೀಸ್ ಠಾಣೆಯ ಸಮೀಪದಲ್ಲೇ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಈ ಸಂಬಂಧ ಪಟ್ಟಣ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.