ಜಿಲ್ಲೆ

ಪತಿಯ ಆಸ್ತಿಯ ಮೇಲೆ ಸಾಲ ಪಡೆದ ಪತ್ನಿ

ಎಚ್.ಡಿ.ಕೋಟೆ: ಗಂಡನ ಅನುಪಸ್ಥಿತಿಯಲ್ಲಿ ಆಧಾರ್ ಕಾರ್ಡ್ ಬಳಸಿ ಬೇರೊಬ್ಬ ವ್ಯಕ್ತಿಯಿಂದ ನಿವೇಶನದ ದಾಖಲೆಯನ್ನು ಉಪ ನೋಂದಣಿ ಕಚೇರಿಯಲ್ಲಿ ಹಕ್ಕು ಖುಲಾಸೆ ಮಾಡಿಸಿಕೊಂಡು ಖಾಸಗಿ ಬ್ಯಾಂಕ್‌ನಲ್ಲಿ ಹತ್ತು ಲಕ್ಷ ರೂ.ಸಾಲ ಪಡೆದ ಪತ್ನಿ, ಗಂಡನೆಂದು ಹಕ್ಕು ಖುಲಾಸೆ ಮಾಡಿದ ವ್ಯಕ್ತಿ ಹಾಗೂ ಸಾಕ್ಷಿದಾರರ ಮೇಲೆ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ತಾಲೂಕಿನ ಗೆಂಡೇಗೌಡರ ಕಾಲನಿ ಗ್ರಾಮದ ಪುಷ್ಪಾ, ಆರ್.ರವಿ, ಅನಿಲ್ ಕುಮಾರ್ ಹಾಗೂ ರಾಕೇಶ್ ಎಂಬುವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಡುಕೋಟೆ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಗೆಂಡೇಗೌಡರ ಕಾಲನಿ ನಿವೇಶನ ಸಂಖ್ಯೆ ಸ್ವತ್ತಿನ 167 ಚ.ಮೀಟರ್ ಅಳತೆಯ ನಿವೇಶನವು ಕೃಷ್ಣಬೋವಿ ಅವರ ಮಗ ಜಯಕೃಷ್ಣ ಹಾಗೂ ಸೊಸೆ ಪುಷ್ಪಾ ಅವರ ಹೆಸರಿನಲ್ಲಿ ಜಂಟಿ ಖಾತೆ ಇದ್ದು, ಕಳೆದ ಹತ್ತು ವರ್ಷಗಳಿಂದ ಗಂಡನಿಂದ ಬೇರೆ ಇದ್ದ ಪುಷ್ಪಾ 2024ರ ಏ.12ರಂದು ಎಚ್.ಡಿ.ಕೋಟೆ ಉಪ ನೋಂದಣಿ ಕಚೇರಿಯಲ್ಲಿ ಗಂಡನಿಂದ ನಿವೇಶನದ ಹಕ್ಕು ಖುಲಾಸೆ ಮಾಡಲು ಅರ್ಜಿ ಸಲ್ಲಿಸಿ ಪತಿಯ ಆಧಾರ್ ಕಾರ್ಡ್ ನೀಡಿ ಪತಿಯ ಬದಲು ಆರ್.ರವಿ ಎಂಬ ವ್ಯಕ್ತಿಯನ್ನು ತನ್ನ ಗಂಡನೆಂದು ಗಂಡನ ಸಹಿಯನ್ನು ನಕಲು ಮಾಡಿ ನೋಂದಣಿಗೆ ಕೂರಿಸಿ ಹಕ್ಕು ಖುಲಾಸೆ ಮಾಡಿಸಿಕೊಂಡು ನಂತರ ಅದನ್ನು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ನೀಡಿ ಇ-ಸ್ವತ್ತು ಮಾಡಿಸಿ ಮೈಸೂರಿನ ಖಾಸಗಿ ಬ್ಯಾಂಕ್ ಒಂದರಲ್ಲಿ ದಾಖಲಾತಿಗಳನ್ನು ನೀಡಿ ಸಾಲ ಪಡೆದಿದ್ದಾಳೆ. ಈ ವಿಚಾರ ಮಾವ ಕೃಷ್ಣಬೋವಿಗೆ ಪಂಚಾಯಿತಿಯಲ್ಲಿ ದಾಖಲಾತಿ ಪರಿಶೀಲನೆ ನಡೆಸಲು ಹೋದಾಗ ಪ್ರಕರಣ ಬೆಳಕಿಗೆ ಬಂದು ಕಳೆದ ಮೂರು ದಿನಗಳ ಹಿಂದೆ ಎಚ್.ಡಿ.ಕೋಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಭಾನುವಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ನನ್ನ ಮಗ ಜಯಕೃಷ್ಣ ಮದ್ಯ ವ್ಯಸನಿ ಆಗಿದ್ದು ಅವನಿಗೆ ತಿಳಿಯದಂತೆ ನನ್ನ ಸೊಸೆ ಬೇರೊಬ್ಬ ಪರ ಪುರಷನ ಜತೆ ಸೇರಿಕೊಂಡು ನಿವೇಶನದ ಹಕ್ಕು ಖುಲಾಸೆ ಮಾಡಿ ನಮ್ಮ ಕುಟುಂಬಕ್ಕೆ ಮೋಸ ಮಾಡಿದ್ದಾರೆ ಎಂದು ಎಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಕಳೆದ ನಾಲ್ಕು ದಿನಗಳ ಹಿಂದೆ ದೂರು ನೀಡಿದರೆ, ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ಅವರು ನಮ್ಮನ್ನೇ ಗದರಿಸಿ ಅನ್ಯಾಯ ಮಾಡಿದವರ ಪರವಾಗಿ ನಮಗೆ ಅನ್ಯಾಯ ಮಾಡಲು ಮುಂದಾದರು. ಈ ಬಗ್ಗೆ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿ, ಮಾಧ್ಯಮದಲ್ಲಿ ಪ್ರಸಾರ ಮಾಡಿದ ನಂತರ ಭಾನುವಾರ ದೂರು ದಾಖಲು ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖಾ ತಂಡ ರಚಿಸಿ ವರದಿ ಮಾಡಿಸಬೇಕು. ಕೃಷ್ಣಬೋವಿ, ದೂರುದಾರ, ಗೆಂಡೇಗೌಡರ ಕಾಲನಿ, ಎಚ್.ಡಿ.ಕೋಟೆ