ಧಾರವಾಡ: ಕರೊನಾ ಸಂಕಷ್ಟ ಕಾಲದಲ್ಲಿ ಯಾರಿಗೂ ಪಡಿತರ ನಿರಾಕರಿಸಬಾರದು. ಪಡಿತರ ಚೀಟಿ ಇಲ್ಲದವರಿಗೆ ನಿಯಮಾವಳಿಯಂತೆ ಕರೊನಾ ಮುಗಿಯುವವರೆಗೂ ಸೌಲಭ್ಯ ಒದಗಿಸಬೇಕು. ಪಡಿತರದಾರರಿಂದ ಸೇವಾ ವೆಚ್ಚದ ನೆಪದಲ್ಲಿ ಹಣ ವಸೂಲಿ ಮಾಡುವ ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್ ರದ್ದುಗೊಳಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ಖಡಕ್ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೊನಾ ಸಂದರ್ಭದಲ್ಲಿ ಪಡಿತರ ದಾಸ್ತಾನು, ವಿತರಣೆ ಹಾಗೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ವಿತರಣೆ ಕುರಿತು ಬುಧವಾರ ಜರುಗಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸರ್ಕಾರವೇ ಸೇವಾ ವೆಚ್ಚ ನೀಡುತ್ತಿದ್ದು, ಗ್ರಾಹಕರಿಂದ ಸಂಗ್ರಹಿಸಬಾರದು. ಪಡಿತರದಾರರಿಂದ ಹಣ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಂದಾಯ, ಆಹಾರ ಇಲಾಖೆ ಹಾಗೂ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ತಂಡಗಳನ್ನು ರಚಿಸಿ ಜಿಲ್ಲೆಯ ಎಲ್ಲ 508 ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆ ಮೇಲೆ ನಿಗಾ ವಹಿಸಲು ಸೂಚನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಸಿ.ಎಂ. ನಿಂಬಣ್ಣವರ, ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಹಾಗೂ ಎಲ್ಲ ತಹಶೀಲ್ದಾರರು, ಆಹಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಂತರ ಸಚಿವ ಗೋಪಾಲಯ್ಯ, ನಗರದ ಜ್ಯುಬಿಲಿ ವೃತ್ತದಲ್ಲಿರುವ ಕರ್ನಾಟಕ ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮದ ಗೋದಾಮಿಗೆ ಭೇಟಿ ನೀಡಿ, ಅಕ್ಕಿ ಮತ್ತು ಬೇಳೆಯ ಗುಣಮಟ್ಟವನ್ನು ಪರಿಶೀಲಿಸಿದರು.
ಕೇಂದ್ರದ ನಿರ್ದೇಶನದಂತೆ ಪಡಿತರ ವಿತರಣೆ: ಲಾಕ್ಡೌನ್ ಇರುವ ಕಾರಣ ಕೇಂದ್ರ ಸರ್ಕಾರದ ನಿರ್ದೇಶನದಂತೆ ಮುಂಗಡವಾಗಿ ಪಡಿತರ ವಿತರಿಸಲಾಗುತ್ತಿದೆ ಎಂದು ಆಹಾರ ಸಚಿವ ಕೆ. ಗೋಪಾಲಯ್ಯ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 29,662 ಅಂತ್ಯೋದಯ, 3,50,796 ಬಿಪಿಎಲ್ ಹಾಗೂ 79,489 ಎಪಿಎಲ್ ಪಡಿತರ ಚೀಟಿಗಳಿವೆ. ಏಪ್ರಿಲ್ನಲ್ಲಿ ಮುಂಗಡವಾಗಿ 13353.886 ಎಂ.ಟಿ. ಅಕ್ಕಿ ಮತ್ತು 1338.616 ಎಂ.ಟಿ. ಗೋಧಿಯನ್ನು ಪಡಿತರ ಚೀಟಿದಾರರಿಗೆ ವಿತರಿಸಲಾಗಿದೆ. ಹೊಸ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿದ 2105 ಬಿಪಿಎಲ್ ಕಾರ್ಡ್ಗಳಿಗೆ 10 ಕೆಜಿಯಂತೆ ಅಕ್ಕಿಯನ್ನು ಮತ್ತು 2 ಆದ್ಯತೇತರ ಪಡಿತರ (ಎಪಿಎಲ್) ಚೀಟಿದಾರರಿಗೆ 10 ಕೆಜಿ ಅಕ್ಕಿಯನ್ನು ತಲಾ 15 ರೂ.ಗಳಂತೆ ವಿತರಿಸಲಾಗಿದೆ. ಅನರ್ಹ ಪಡಿತರ ಚೀಟಿದಾರರಿಂದ 5,19,060 ರೂ. ದಂಡ ವಿಧಿಸಿ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಲಾಗಿದೆ. ಪಡಿತರ ವಿತರಣೆಯಲ್ಲಿ ಅವ್ಯವಹಾರ ಕಂಡುಬಂದ ಹಿನ್ನೆಲೆಯಲ್ಲಿ 3 ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸಲಾಗಿದೆ. 7 ಅಂಗಡಿದಾರರಿಗೆ ದಂಡ, ನಾಲ್ವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಸೀಮೆಎಣ್ಣೆ ದಾಸ್ತಾನು ಇದ್ದು, ಕೊರತೆ ಇಲ್ಲ ಎಂದರು.
ಶಾಸಕ-ಆಹಾರ ಇಲಾಖೆ ಅಧಿಕಾರಿ ಮಧ್ಯೆ ಜಟಾಪಟಿ: ಕಲಘಟಗಿ ಶಾಸಕ ನಿಂಬಣ್ಣವರ ಹಾಗೂ ಆಹಾರ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಮಧ್ಯೆ ಆಹಾರ ಸಚಿವ ಕೆ. ಗೋಪಾಲಯ್ಯ ಎದುರಲ್ಲೇ ಬುಧವಾರ ಜಟಾಪಟಿ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಚಿವರು ಕರೆದಿದ್ದ ಸಭೆ ಮುಗಿಯುತ್ತಲೇ ಅಧಿಕಾರಿಯನ್ನು ವೇದಿಕೆಯತ್ತ ಕರೆದ ಶಾಸಕ, ಚುನಾಯಿತ ಪ್ರತಿನಿಧಿಗಳಿಗೆ ಮರ್ಯಾದೆ ಕೊಡಿ ಎಂದು ಹರಿಹಾಯ್ದರು. ಸದಾಶಿವ ಮರ್ಜಿ ಈ ಹಿಂದೆ ನ್ಯಾಯಬೆಲೆ ಅಂಗಡಿಯೊಂದರ ಲೈಸೆನ್ಸ್ ರದ್ದು ಮಾಡಿದ ವಿಚಾರಕ್ಕೆ ಮಾತಿಗೆ ಮಾತು ಬೆಳೆಯಿತು. ಇದೇ ವಿಚಾರವಾಗಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಸಭೆ ಮುಗಿಸಿ ವೇದಿಕೆಯಿಂದ ಹೊರನಡೆಯುತ್ತಿದ್ದ ಸಚಿವ ಗೋಪಾಲಯ್ಯ, ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಸೂಚಿಸಿದರು.