ವಿಜಯವಾಣಿ ಸುದ್ದಿಜಾಲ ಗದಗ
ಬಡ ಜನರಿಗೆ ಆಹಾರ ಧಾನ್ಯ ವಿತರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು ಪಡಿತರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಅರ್ಹ ಫಲಾನುಭವಿಗಳಿಗೆ ನಿಗದಿತ ಪ್ರಮಾಣದ ಆಹಾರ ಧಾನ್ಯ ವಿತರಿಸಬೇಕು ಎಂದು ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ವಿತರಿಸಲಾಗಿರುವ ಬಿ.ಪಿ.ಎಲ್ ಕಾರ್ಡ್‍ಗಳ ಫಲಾನುಭವಿಗಳ ಸಮೀಕ್ಷೆ ಜರುಗಿಸಿ ಮೂರು ಹೆಕ್ಟೇರ್‍ಗಿಂತ ಹೆಚ್ಚಿನ ಕೃಷಿ ಭೂಮಿ, ಸರ್ಕಾರಿ ನೌಕರರಾಗಿದ್ದರೆ ಹಾಗೂ ಆದಾಯ ತೆರಿಗೆ ಪಾವತಿದಾರರಾಗಿದ್ದು ಅಂಥವರ ಬಿ.ಪಿ.ಎಲ್ ಕಾರ್ಡ್ ಗಳನ್ನು ರದ್ದುಗೊಳಿಸಬೇಕು ಎಂದರು.
ಅಲ್ಲದೇ ಪೆಟ್ರೋಲ್ ಬಂಕ್‍ಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪೆಟ್ರೋಲ್ ತುಂಬಿಸುವ ಗನ್‍ಗಳನ್ನು ಪರಿಶೀಲಿಸಿಬೇಕು, ಇದರಲ್ಲಿ ಯಾವುದಾದರೂ ಲೋಪಗಳು ಕಂಡುಬಂದಲ್ಲಿ ಕೂಡಲೇ ಪ್ರಕರಣ ದಾಖಲಿಸುವಂತೆ ತಿಳಿಸಿದರು.
ಅರಣ್ಯ ಇಲಾಖೆ ವತಿಯಿಂದ ನೆಡಲಾಗುವ ಮರಗಳ ಪೋಷಣೆಗೆ ಹೆಚ್ಚಿನ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಹಸಿರೀಕರಣಕ್ಕೆ ಒತ್ತು ನೀಡಿ ಬೇಡಿಕೆಗೆ ಅನುಗುಣವಾಗಿ ಸಸಿಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಸಚಿವ ಉಮೇಶ ಕತ್ತಿ ನಿರ್ದೇಶನ ನೀಡಿದರು.
ಶಾಸಕ ಎಚ್.ಕೆ.ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿನ ಅಕ್ರಮ ಅಕ್ಕಿ ಸಾಗಾಣಿಕೆಯನ್ನು ನಿಯಂತ್ರಿಸಲು ಅಕ್ರಮ ದಂಧೆಕೊರರ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ದಾಳಿ ವೇಳೆ ಪೊಲೀಸ್ ಹಾಗೂ ಇತರೆ ಇಲಾಖೆಗಳ ಸಹಕಾರ ಪಡೆಯಬೇಕು. ಅಲ್ಲದೇ ಜಿಲ್ಲೆಯಲ್ಲಿನ ವೆಬ್ರಿಡ್ಜ್‍ಗಳ ಕುರಿತು ದೂರುಗಳು ಬಂದಿದ್ದು ಈ ಕುರಿತು ಪರಿಶೀಲಿಸಿ ಅಗತ್ಯದ ಕ್ರಮ ಕೈಗೊಳ್ಳಬೇಕೆಂದರು.
ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಅರಣ್ಯ ಇಲಾಖೆಯಿಂದ ಗ್ರಾಮ, ನಗರದ ಪ್ರತಿ ಮನೆಗೆ ಸಸಿ ನೀಡುವ ಮೂಲಕ ಗ್ರಾಮ, ನಗರಗಳನ್ನು ಹಸಿರಿಕರಣ ಮಾಡಲು ಅಧಿಕಾರಿಗಳು ಮುಂದಾಗಬೇಕು. ಇದಕ್ಕಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ಆಹಾರ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀಘ್ರವೇ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ಕಪ್ಪತಗುಡ್ಡದಲ್ಲಿ ಅನೇಕ ಔಷಧೀಯ ಸಸ್ಯಗಳಿದ್ದು ಇಲ್ಲಿ ಮೇಲಿಂದ ಮೇಲೆ ಬೆಂಕಿ ಬಿದ್ದು, ಔಷಧಿ ವನ್ಯ ಸಂಪತ್ತು ನಾಶವಾಗುತ್ತಿದೆ. ಇಲ್ಲಿನ ಅಮೂಲ್ಯ ಔಷಧೀಯ ಸಸ್ಯಗಳನ್ನು ಪ್ರತ್ಯೇಕವಾಗಿ ಪೋಷಣೆ ಮಾಡಲು ಅಗತ್ಯದ ಕ್ರಮ ಕೈಗೊಳ್ಳುವದರ ಜತೆಗೆ ಕಪ್ಪತಗುಡ್ಡದಲ್ಲಿ ಔಷಧೀಯ ಸಸ್ಯಗಳ ಕುರಿತು ಅಧ್ಯಯನ ಕೇಂದ್ರವನ್ನು ಸ್ಥಾಪಿಸುವಂತೆ ಸಚಿವರಲ್ಲಿ ಕೋರಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರ ಗಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ 345 ನ್ಯಾಯ ಬೆಲೆ ಅಂಗಡಿಗಳು 7 ಉಗ್ರಾಣಗಳು, 20 ಗ್ಯಾಸ್ ಏಜೆನ್ಸಿಗಳು ಹಾಗೂ 115 ಪೆಟ್ರೋಲ್ ಬಂಕ್‍ಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ 2,92,214 ಪಡಿತರ ಚೀಟಿಯನ್ನು ವಿತರಿಸಲಾಗಿದ್ದು ಇದರಲ್ಲಿ 28,669 ಅಂತ್ಯೋದಯ, 2,25,734 ಬಿ.ಪಿ.ಎಲ್ ಹಾಗೂ 37,811 ಎ.ಪಿ.ಎಲ್ ಕಾರ್ಡ್‍ಗಳಲ್ಲಿ ಒಟ್ಟು 9,62,650 ಸದಸ್ಯರು ಪಡಿತರವನ್ನು ಪಡೆಯುತ್ತಿದ್ದಾರೆ. ಅಲ್ಲದೇ 136 ಹೊಸ ನ್ಯಾಯ ಬೆಲೆ ಅಂಗಡಿಗಳಿಗೆ ಬೇಡಿಕೆ ಇದ್ದು ಈ ಕುರಿತು 261 ಅರ್ಜಿ ಸ್ವೀಕರಿಸಲಾಗಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಜಿ. ಪಂ. ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.