ಜಿಲ್ಲೆ

ಪಡಿತರ ಚೀಟಿ ವಿತರಿಸಲು ಕ್ರಮವಹಿಸಿ

ಚಿತ್ರದುರ್ಗ: ಪಡಿತರ ಚೀಟಿ ವಿತರಣೆ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಕೆಕೆಎನ್‌ಎಸ್‌ಎಸ್ ಜಿಲ್ಲಾ ಸಮಿತಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ನ್ಯಾಯಯುತ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಪಡಿತರ ಚೀಟಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದ್ದು, ಅನೇಕ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ಸಿಗದಂತಾಗಿದೆ. ಇದರಿಂದ ಕೊಳೆಗೇರಿ ನಿವಾಸಿಗಳೂ ಜೀವನ ನಡೆಸುವುದು ಕಷ್ಟಕರವಾಗಿದ್ದು, ಪ್ರಕ್ರಿಯೆ ಆರಂಭಿಸುವ ಮೂಲಕ ಸೌಲಭ್ಯ ಪಡೆಯಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸಿಹಿನೀರು ಹೊಂಡ, ಚೋಳಗುಡ್ಡ, ಕಾಮನಬಾವಿ, ವಿಜಯನಗರ ಬಡಾವಣೆ, ಹಿಮ್ಮತ್‌ನಗರ, ಸಿ.ಕೆ.ಪುರ, ಕಬೀರಾನಂದ ನಗರ, ಮೇಕೆಬಂಡೆ ಇತರೆ ಕೊಳಚೆ ಪ್ರದೇಶಗಳಲ್ಲಿ ಇನ್ನೂ ಹಕ್ಕುಪತ್ರ ವಿತರಿಸಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಬಡವರಿಗೆ ಸೂಕ್ತ ಚಿಕಿತ್ಸೆ ಸಿಗದೆ, ಪರದಾಡುವಂತಾಗಿದೆ. ಆಶ್ರಯ ಬಡಾವಣೆ ನಿವಾಸಿಗಳು ಸಾಲ ಮರುಪಾವತಿಸಿದ್ದರೂ ನಗರಸಭೆ ತಿರುವಳಿ ಪತ್ರ ನೀಡಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಕೋರಿದರು.

ಸಂಘಟನೆ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ಎನ್.ರಂಗಸ್ವಾಮಿ, ಎಚ್.ಮೈಲಾರಪ್ಪ, ಇಮಾಂಸಾಬ್, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್ ಇತರರಿದ್ದರು.