ಕೆಂಭಾವಿ: ಸರ್ಕಾರದ ಗ್ಯಾರಂಟಿ ಯೋಜನೆ ಲಾಭ ಪಡೆಯಲು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಅಗತ್ಯವಿದ್ದು, ಕಳೆದ ಒಂದು ವಾರದಿಂದ ತಿದ್ದುಪಡಿ ಮತ್ತು ಹೊಸ ಪಡಿತರ ಚೀಟಿ ಮಾಡಿಸಲು ಜನರು ಪರದಾಡುವಂತಾಗಿದೆ.
ಹೊಸ ಪಡಿತರ ಚೀಟಿ ಪಡೆಯಲು ಸರ್ಕಾರ ಹತ್ತು ದಿನಗಳ ಗಡುವು ನೀಡಿದ್ದು, ಇನ್ನುಳಿದ ಕೇವಲ ಮೂರು ದಿನಗಳಲ್ಲಿ ನೂರಾರು ಜನರು ಪಡಿತರಚೀಟಿ ಪಡೆಯಲು ಹರಸಾಹಸ ಮಾಡಬೇಕಾದ ಅನಿವಾರ್ಯವಾಗಿದೆ. ಸರ್ವರ್ ಸಮಸ್ಯೆಯಿಂದ ಜನರು ತೀವ್ರ ತೊಂದರೆ ಅನುಭವಿಸಬೇಕಾಗಿದೆ.
ಪಟ್ಟಣದ ಹಲವು ಕಂಪ್ಯೂಟರ್ ಕೇಂದ್ರಗಳಲ್ಲಿ ವಲಯದ ಹಲವು ಗ್ರಾಮಸ್ಥರು ನಿತ್ಯ ಆಗಮಿಸುತ್ತಿದ್ದಾರೆ. ಸರ್ಕಾರದ ಅಧಿಕೃತ ವೆಬ್‌ಸೈಟ್‌ನ ಸರ್ವರ್ ಸಂಪೂರ್ಣ ನಿಧಾನಗತಿಯಲ್ಲಿದೆ. ಅಲ್ಲದೆ ಟೋಲ್ ಫ್ರೀ ನಂಬರ್‌ಗೆ ಕಾಲ್ ಮಾಡಿದರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ದೂರು ಜನರಿಂದ ಕೇಳಿಬರುತ್ತಿದೆ. ಪಡಿತರ ಚೀಟಿ ಲಾಭ ಪಡೆಯಲು ಸಾರ್ವಜನಿಕರು ಇನ್ನೆಷ್ಟು ಹೈರಾಣಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.