ಯಳಂದೂರು: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ತಾಲೂಕಿನ ಮದ್ದೂರು ಗ್ರಾಮದ ಬಳಿ ಆಹಾರ ಇಲಾಖೆ ಹಾಗೂ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದು, ಗೂಡ್ಸ್ ಆಟೋ ಹಾಗೂ ಅಕ್ಕಿಯನ್ನು ಸೋಮವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಮದ್ದೂರು ಗ್ರಾಮದ ಅಸ್ಲಂಪಾಷ ಹಾಗೂ ತಿ.ನರಸೀಪುರದ ರೆಹಮಾನ್ ಬಂಧಿತರು. ಈ ಇಬ್ಬರೂ ಗೂಡ್ಸ್ ಆಟೋದಲ್ಲಿ 29 ಪ್ಲಾಸ್ಟಿಕ್ ಚೀಲಗಳಲ್ಲಿ 1,570 ಕೆಜಿ ಅಕ್ಕಿಯನ್ನು ತುಂಬಿಕೊಂಡು ಅದರ ಮೇಲೆ ಗುಜರಿ ವಸ್ತುಗಳನ್ನು ಹಾಕಿಕೊಂಡು ಮದ್ದೂರು ಗ್ರಾಮದಿಂದ ಯಳಂದೂರು ಕಡೆಗೆ ಬರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಬಿಸಲಯ್ಯ, ಸಿಪಿಐ ಶ್ರೀಕಾಂತ್, ಪಿಎಸ್‌ಐ ಆಕಾಶ್, ಪೇದೆಗಳಾದ ಶಿವಕುಮಾರ್, ಜಡೇಸ್ವಾಮಿ, ಉಸ್ಮಾನ್ ನೇತೃತ್ವದ ತಂಡ ದಾಳಿ ನಡೆಸಿ ಮಾಲು ಸಮೇತ ಇಬ್ಬರನ್ನೂ ಬಂಧಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರನ್ನೂ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.