ಜಿಲ್ಲೆ

ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ : ಪೂರ್ವ, ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯಾಚರಣೆ

ಚನ್ನಪಟ್ಟಣ: ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಬಯಲಿಗೆ ಬಂದಿದೆ. ಬಡವರ ಹೊಟ್ಟೆ ತುಂಬಿಸಲು ಸರ್ಕಾರ ನೀಡುವ ಉಚಿತ ಪಡಿತರವನ್ನು ಕಾಳಸಂತೆಯಲ್ಲಿ ಆತಂಕವಿಲ್ಲದೆ ಮಾರಾಟ ಮಾಡುವ ಜಾಲ ತಾಲೂಕಿನಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವುದು ಬಹಿರಂಗವಾಗಿದೆ.

ಸರ್ಕಾರ ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಅನ್ನಭಾಗ್ಯ ಹೆಸರಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿತ್ತು. ಆದರೆ, ಯೋಜನೆಯಲ್ಲಿ ನೀಡುತ್ತಿರುವ ಉಚಿತ ಅಕ್ಕಿ ಕಾಳಸಂತೆಯಲ್ಲಿ ಭರ್ಜರಿ ಮಾರಾಟವಾಗುತ್ತಿದೆ. ನಗರದಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳು ಈ ದಂಧೆಗೆ ಸಾಕ್ಷಿಯಾಗಿವೆ.

ಅಕ್ಕಿ ತುಂಬಿದ ಕ್ಯಾಂಟರ್ ವಶ: ನಗರದ ಮದೀನಾ ಚೌಕ ರಸ್ತೆಯಲ್ಲಿರುವ ಆ್ಯಪಲ್ ಸ್ಕೂಲ್ ಬಳಿ ಕ್ಯಾಂಟರ್‌ವೊಂದಕ್ಕೆ ಪಡಿತರ ಅಕ್ಕಿ ತುಂಬಲಾಗುತ್ತಿದೆ ಎಂಬ ಖಚಿತ ವಾಹಿತಿ ಮೇರೆಗೆ ಭಾನುವಾರ ರಾತ್ರಿ ದಾಳಿ ಮಾಡಿರುವ ಪೂರ್ವ ಠಾಣೆ ಪೊಲೀಸರು, ಅಕ್ಕಿಯಿದ್ದ ವಾಹನ ವಶಕ್ಕೆ ಪಡೆದಿದ್ದಾರೆ. ಈ ವೇಳೆ ವಾಹನದ ಚಾಲಕ ಹಾಗೂ ಇದಕ್ಕೆ ಸಂಬಂಧಪಟ್ಟ ಆಸಾಮಿಗಳು ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ 135ಕ್ಕೂ ಹೆಚ್ಚಿನ ಅಕ್ಕಿಚೀಲಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನ ಚಾಲಕ ಹಾಗೂ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಅಕ್ಕಿಯನ್ನು ತಾಲೂಕು ಆಹಾರ ಮತ್ತು ಸರಬರಾಜು ಇಲಾಖೆಯ ವಶಕ್ಕೆ ನೀಡಲಾಗಿದೆ ಎಂದು ಪಿಎಸ್‌ಐ ನಂಜುಂಡಸ್ವಾಮಿ ಮಾಹಿತಿ ನೀಡಿದ್ದಾರೆ.

13 ಟನ್ ಅಕ್ಕಿ ವಶ: ನಗರದ ಮಹದೇಶ್ವರ ನಗರದಲ್ಲಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಗ್ರಾವಾಂತರ ಪೊಲೀಸರು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಪಡಿತರ ಅಕ್ಕಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ವಾಹಿತಿ ಮೇರೆಗೆ ಪಿಎಸ್‌ಐ ಲಿಯಾಕತ್ ಮತ್ತು ತಂಡ ವಾಹನ ಅಡ್ಡಗಟ್ಟಿ ಪರಿಶೀಲಿಸಿದಾಗ 250 ಮೂಟೆ ಅಕ್ಕಿ ಪತ್ತೆಯಾಗಿದೆ. ಪೊಲೀಸರು ಚಾಲಕ ಪರ್ವೀಜ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಎರಡು ಪ್ರಕರಣಗಳು ಪಡಿತರ ಅಕ್ಕಿ ಕಾಳಸಂತೆಯಲ್ಲಿ ಬಿಕರಿಯಾಗುತ್ತಿದೆ ಎಂಬುದಕ್ಕೆ ಪುಷ್ಟಿ ನೀಡಿವೆ.

ಖರೀದಿ ಜಾಲ ಸಕ್ರಿಯ: ಪಡಿತರ ಚೀಟಿ ಹೊಂದಿರುವ ಕುಟುಂಬದ ತಲಾ ಒಬ್ಬರಿಗೆ ನೀಡಲಾಗುವ 10 ಕೆಜಿ ಅಕ್ಕಿ ಖರೀದಿಸುವ ಬೃಹತ್ ಜಾಲ ತಾಲೂಕಿನಲ್ಲಿ ಸಕ್ರಿಯವಾಗಿದೆ. ನಾಲ್ಕು ಸದಸ್ಯರಿರುವ ಕುಟುಂಬಕ್ಕೆ ಈ ಯೋಜನೆಯಡಿ ತಿಂಗಳಿಗೆ 40 ಕೆ.ಜಿ. ಅಕ್ಕಿ ಲಭ್ಯವಾಗಲಿದೆ. ಹಲವು ಮಂದಿ ಈ ಅಕ್ಕಿ ಬಳಸಿಕೊಳ್ಳುತ್ತಾರೆ. ಆದರೆ, ಹಲವು ಮಂದಿ ಕೆ.ಜಿ.ಗೆ 10ರಿಂದ 15 ರೂವರೆಗೆ ಅಕ್ಕಿ ಮಾರಾಟ ಮಾಡುತ್ತಿದ್ದಾರೆ. ಈ ಅಕ್ಕಿಯನ್ನು ಮನೆಮನೆಗೆ ಹೋಗಿ ಖರೀದಿಸುವ ಸಕ್ರಿಯ ಜಾಲ ಕಾರ್ಯನಿರ್ವಹಿಸುತ್ತಿದ್ದು, ಪಡಿತರದಾರರಿಂದ ಅಕ್ಕಿ ಖರೀದಿಸಿ ದಾಸ್ತಾನು ಇಟ್ಟು ಲೋಡ್‌ಗಟ್ಟಲೆ ಮಾರಾಟ ಮಾಡುತ್ತಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಈ ಅಕ್ಕಿಯನ್ನು ಪಾಲಿಶ್ ಮಾಡಿಸಿ ದಿನಸಿ ಅಂಗಡಿಗಳಿಗೆ ನೀಡಲಾಗುತ್ತದೆ ಎನ್ನಲಾಗಿದೆ.

ಪಡಿತರ ಅಕ್ಕಿ ವಾರಾಟ ಹಾಗೂ ಖರೀದಿಸುವುದು ಕಾನೂನುಬಾಹಿರ. ಈ ಬಗ್ಗೆ ಕಠಿಣಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪೊಲೀಸ್ ಇಲಾಖೆಗೂ ಈ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಹೇಳಲಾಗಿದೆ. ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ವಾರಾಟ ವಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಎಲ್.ನಾಗೇಶ್, ತಹಸೀಲ್ದಾರ್ ಚನ್ನಪಟ್ಟಣ