ಕಡೂರು: ಬಿ.ಮಲ್ಲೇನಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಡಿತರದಾರರಿಗೆ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿ ಮಾಲೀಕ ವಿತರಿಸಿರುವ ಕುರಿತು ಗ್ರಾಮಸ್ಥರು ಮಂಗಳವಾರ ವಿರೋಧಿಸಿದ್ದಾರೆ.
ಪಡಿತರದಾರನಿಗೆ ಅಕ್ಕಿ ವಿತರಣೆಯಲ್ಲಿ ವ್ಯತ್ಯಾಸ ಮಾಡಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಗ್ರಾಹಕರು ವೀಡಿಯೋ ವೈರಲ್ ಆಗಿದೆ. ಬಿ.ಮಲ್ಲೇನಹಳ್ಳಿ ನ್ಯಾಯ ಬೆಲೆ ಅಂಗಡಿ ವ್ಯಾಪ್ತಿಗೆ ಬಿ.ಮಲ್ಲೇನಹಳ್ಳಿ, ಬಿ.ಬೊಮ್ಮೇನಹಳ್ಳಿ, ಬಿ.ಬಸವನಹಳ್ಳಿ ತಾಂಡ ಮತ್ತು ಗೊಲ್ಲರಹಟ್ಟಿ ಗ್ರಾಮಗಳ ಪಡಿತರದಾರರು ಒಳಪಡಲಿದ್ದಾರೆ. ಮಂಗಳವಾರ ಮಧ್ಯಾಹ್ನ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡುವ ಸಂದರ್ಭದಲ್ಲಿ 8 ಪಡಿತರ ಚೀಟಿದಾರರಿಗೆ 105 ಕೆಜಿ ಅಕ್ಕಿ ಬದಲಾಗಿ 75 ಕೆಜಿ ಅಕ್ಕಿ ವಿತರಿಸಿರುವುದು ಹಾಗೂ 75 ಕೆಜಿ ಬದಲಾಗಿ 55 ಕೆಜಿ ಹಾಗೂ 30ಕ್ಕೂ ಹೆಚ್ಚು ಪಡಿತರದಾರರಿಗೆ ತಲಾ 2 ಕೆಜಿ ಅಕ್ಕಿಯನ್ನು ಕಡಿಮೆ ನೀಡಿರುವ ಬಗ್ಗೆ ಪ್ರಶ್ನಿಸಿದ್ದಾರೆ.
ಈ ಸಂಬಂಧ ವೀಡಿಯೋ ಮಾಡಿರುವ ಬಿ.ಬಸವನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಮಂಜುನಾಥ್, ಬಡವರಿಗೇಕೆ ಅನ್ಯಾಯ ಮಾಡುತ್ತೀರಿ. ನಮ್ಮಿಂದ ಕಿತ್ತುಕೊಂಡ ಅಕ್ಕಿಯನ್ನು ಅನಾಥಾಶ್ರಮಕ್ಕೆ ಕೊಡುತ್ತೀರಾ? ಎಂದು ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಪ್ರಶ್ನಿಸಿದ್ದಾರೆ. ಈ ಹಿಂದೆ 1 ಕೆಜಿ ಅಕ್ಕಿಯನ್ನು ನೇರವಾಗಿಯೇ ಕಡಿಮೆ ಕೊಡಲಾಗುತ್ತಿತ್ತು. ಆದರೀಗ 30 ಕೆಜಿ ಅಕ್ಕಿಗೆ ಕನ್ನ ಹಾಕಿದರೆ ಸಹಿಸಿಕೊಳ್ಳುವುದು ಹೇಗೆ ಎಂದು ಕಿಡಿಕಾರಿದರು.
ಬಿ.ಬಸವನಹಳ್ಳಿ ಗ್ರಾಮದ ವ್ಯಾಪ್ತಿಯ ಬಹುತೇಕ ಅಂತ್ಯೋದಯ ಮತ್ತು ಇತರ ಕಾರ್ಡ್‌ದಾರರಿಗೆ ಅಕ್ಕಿ ನೀಡುವಲ್ಲಿ ವ್ಯತ್ಯಾಸ ಮಾಡಿದ್ದಾರೆ. ಸರ್ಕಾರ ಬಡವರು ಮತ್ತು ಕೂಲಿ ಕಾರ್ಮಿಕರಿಗಾಗಿ ನೀಡುತ್ತಿರುವ ಅಕ್ಕಿಗೆ ಕನ್ನ ಹಾಕುವ ನ್ಯಾಯಬೆಲೆ ಅಂಗಡಿಯನ್ನು ಸಮಗ್ರ ತನಿಖೆ ನಡೆಸಿ ಅಂಗಡಿ ಮಾಲೀಕನ ವಿರುದ್ಧ ಆಹಾರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗೆ ಆಹಾರ ಇಲಾಖೆ ನಿರೀಕ್ಷಕರಾದ ಶಿಲ್ಪಾ ಮತ್ತು ಶ್ರೀನಿವಾಸ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. ಬಿ.ಬಸವನಹಳ್ಳಿ ಮಂಜುನಾಥ, ಕಲ್ಲೇಶ್, ಪ್ರಸನ್ನ, ಬಿ.ಎಂ.ಕಲ್ಲೇಶ್, ಬಿ.ಸಿ.ಶಶಿಕುಮಾರ್, ಬಿ.ರಘು ಇತರರಿದ್ದರು.