ಹನೂರು: ಸರ್ಕಾರದಿಂದ ನೀಡಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಆರೋಪಿಯನ್ನು ಶುಕ್ರವಾರ ಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದು, 1,389 ಕೆ.ಜಿ.ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಕೊಳ್ಳೇಗಾಲದ ಸೈಯದ್ ನಯಿಮ್ ಎಂಬಾತನೇ ಬಂಧಿತ ಆರೋಪಿ. ಈತ ಹನೂರು ಭಾಗದ ಗ್ರಾಮಗಳಲ್ಲಿ ಜನರಿಂದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಗೂಡ್ಸ್ ವಾಹನದಲ್ಲಿ ಮಂಡ್ಯ ಕಡೆಗೆ ಸಾಗಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಸಿ.ಆನಂದಮೂರ್ತಿ, ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿ ತಂಡ ಪಟ್ಟಣದಲ್ಲಿ ದಾಳಿ ನಡೆಸಿದರು. ವಾಹನವನ್ನು ತಡೆದು ಪರಿಶೀಲಿಸಿದಾಗ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿರುವುದು ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಿ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ತಾಲೂಕು ಆಹಾರ ನಿರೀಕ್ಷಕ ವಿಷ್ಣುಮೂರ್ತಿ, ಪೊಲೀಸ್ ಸಿಬ್ಬಂದಿ ಚಂದ್ರು, ವಿಶ್ವನಾಥ್ ಮತ್ತಿತರರಿದ್ದರು.