ಕೊಳ್ಳೇಗಾಲ: ತಾಲೂಕಿನ ಹೊಸಮಾಲಂಗಿ ಗ್ರಾಮದಲ್ಲಿ ಮನೆಯೊಂದರ ಮುಂದೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 27 ಮೂಟೆಯಲ್ಲಿದ್ದ 1310 ಕೆ.ಜಿ ಅಕ್ಕಿಯನ್ನು ಆಹಾರ ನಿರೀಕ್ಷಕ ಪ್ರಸಾದ್ ಹಾಗೂ ತಂಡ ದಾಳಿ ನಡೆಸಿ ಶನಿವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಹೊಸಮಾಲಂಗಿ ಶಿವಸ್ವಾಮಿ ಅವರ ಮನೆ ಮುಂದೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದ ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಪ್ರಸಾದ್ ಹಾಗೂ ಶಿರಸ್ತೇದಾರ್ ವಿಶ್ವನಾಥ್ ದಾಳಿ ನಡೆಸಿ ಅಕ್ಕಿಯನ್ನು ವಶಕ್ಕೆ ಪಡೆದು, ನಾಪತ್ತೆಯಾಗಿರುವ ಆರೋಪಿ ಪತ್ತೆಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಯು ಗ್ರಾಮದ ಸುತ್ತಮುತ್ತಲ ಜನರಿಂದ ಕಡಿಮೆ ಬೆಲೆಗೆ ಪಡಿತರ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸಿಟ್ಟಿದನು ಎನ್ನಲಾಗಿದೆ. ಬಳಿಕ ಆಹಾರ ಇಲಾಖೆ ಅಧಿಕಾರಿಗಳು ಅಕ್ಕಿಯನ್ನು ಅಗರ ಮಾಂಬಳ್ಳಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾದ ಆರೋಪಿ ಪತ್ತೆಗೆ ಪೊಲೀಸರು ಕ್ರಮ ವಹಿಸಿದ್ದಾರೆ.