ಜಿಲ್ಲೆ

ಪಠ್ಯೇತರ ಚಟುವಟಿಕೆಗಳೂ ಮುಖ್ಯ

ಚಿತ್ರದುರ್ಗ: ನೀತಿ ಪಾಠಗಳು ಬಹಳಷ್ಟು ಪರಿಣಾಮ ಬೀರುತ್ತವೆ. ಹೀಗಾಗಿ ಚಿಕ್ಕ ಮಕ್ಕಳ ಮನಸ್ಸನ್ನು ಪಾಲಕರು, ಶಿಕ್ಷಕರು ಪಠ್ಯೇತರ ಚಟುವಟಿಕೆಯತ್ತ ಕೇಂದ್ರೀಕರಿಸಲು ಗಮನಹರಿಸಬೇಕು ಎಂದು ಬಸವಮಹಾಂತ ಶ್ರೀ ಸಲಹೆ ನೀಡಿದರು.

2021-22, 2022-23ನೇ ಸಾಲಿನ ವಚನಕಮ್ಮಟ ರಾಜ್ಯಮಟ್ಟದ ರ್ಯಾಂಕ್ ವಿಜೇತರಿಗೆ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ಬಸವಾದಿ ಶಿವಶರಣರ ವಚನಗಳಲ್ಲಿ ಜೀವನ ಮೌಲ್ಯಗಳಿವೆ. ಚಿಕ್ಕಂದಿನಿಂದಲೇ ಈ ಕುರಿತು ಅರಿವು ಮೂಡಿಸಿದರೆ, ಸನ್ಮಾರ್ಗದಲ್ಲಿ ಮುನ್ನಡೆಸಲು ಸಹಕಾರಿಯಾಗಿದೆ. ಆದ ಕಾರಣ ಟಿವಿ, ಮೊಬೈಲ್ ಗೀಳಿನಿಂದ ತಪ್ಪಿಸಿ ಎಂದರು.

ನಿವೃತ್ತ ಪ್ರಾಚಾರ್ಯ ಪ್ರೊ.ಸಿ.ಎಂ.ಚಂದ್ರಪ್ಪ ಮಾತನಾಡಿ, ವಚನಕಮ್ಮಟ ಪರೀಕ್ಷೆ ತೆಗೆದುಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ರಾಜ್ಯ ಮಾತ್ರವಲ್ಲ. ಕೇರಳ, ಮಹಾರಾಷ್ಟ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಕ್ಕೂ ವಿಸ್ತರಿಸಿದೆ ಎಂದು ಹೇಳಿದರು.

ಬಸವಪ್ರಭು ಶ್ರೀ ಮಾತನಾಡಿ, ವಚನ ಸಾಹಿತ್ಯ ಮನುಷ್ಯರಿಗೆ ಸುಖ-ದುಃಖ, ಶಾಂತಿ-ನೆಮ್ಮದಿಯ ದಾರಿ ತೋರಿಸುತ್ತದೆ. ದೈಹಿಕ ಮತ್ತು ಮಾನಸಿಕ ಹಿತ ಕಾಪಾಡಲು ಸಹಕಾರಿಯಾಗಿದೆ ಎಂದು ಸಲಹೆ ನೀಡಿದರು.

ವಚನಕಮ್ಮಟ ಪರೀಕ್ಷೆ ನಿರ್ದೇಶಕ ಎಂ.ವೀರಭದ್ರಪ್ಪ, ಶಿಕ್ಷಕಿ ನೇತ್ರಾವತಿ, ನಿವೃತ್ತ ಉಪನ್ಯಾಸಕ ಟಿ.ಪಿ.ಜ್ಞಾನಮೂರ್ತಿ ಇತರರಿದ್ದರು.