ಜಿಲ್ಲೆ

ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಿ


ಚನ್ನರಾಯಪಟ್ಟಣ: ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಆಸಕ್ತಿ ತೋರಿಸುವ ರೀತಿಯಲ್ಲಿಯೇ ಇತರೆ ಚಟುವಟಿಕೆಗಳಿಗೂ ಅದ್ಯತೆ ನೀಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ತಾಲೂಕಿನ ಹಿರೀಸಾವೆ ಗ್ರಾಮದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜತೆಗೆ ಪಾಲಕರ ಪಾತ್ರ ಪ್ರಮುಖ ಎಂದರು.


ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಮನೆಯಲ್ಲಿ ಹಾಗೂ ಶಾಲೆಯಲ್ಲಿ ಉತ್ತಮ ಪರಿಸರ ಇರಬೇಕು. ಶಾಲೆಯಲ್ಲಿ ಶಿಕ್ಷಕರಿಗೂ ಹೆಚ್ಚಿನ ಒತ್ತಡ ಇರುತ್ತದೆ. ಇದನ್ನು ಪೊಷಕರು ಅರ್ಥಮಾಡಿಕೊಂಡು ಮನೆಯಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೂ ದಿನದ ಸ್ವಲ್ಪ ಸಮಯವನ್ನು ನೀಡಬೇಕು ಎಂದು ತಿಳಿಸಿದರು.


ಈ ಶಾಲೆಗೆ ನಾಲ್ಕು ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಎರಡು ಹಳೆಯ ಕೋಣೆಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಂದಿನ ವರ್ಷ ಶತಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.


ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮುಖಂಡರಾದ ರವಿಕುಮಾರ್, ಮಹೇಶ್, ಎಚ್.ಕೆ.ವೆಂಕಟೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜು, ಕಸಾಪ ಅಧ್ಯಕ್ಷ ಪ್ರಮೋದ್, ದಲಿತ ಸಂಘಟನೆಯ ಜಯಣ್ಣ, ಮಂಜುನಾಥ್, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ದೇವೇಗೌಡ, ಮುಖ್ಯಶಿಕ್ಷಕ ಧರ್ಮೇಶ್, ಎಸ್ಡಿಎಂಸಿ ಸದಸ್ಯರು, ಶಿಕ್ಷಕ ವೃಂದ ಹಾಗೂ ಇತರರು ಇದ್ದರು.