ಅರಟಾಳ: ವಿದ್ಯಾರ್ಥಿಗಳು ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ತಾಪಂ ಮಾಜಿ ಸದಸ್ಯ ಮಲ್ಲಪ್ಪ ಡಂಗಿ ಹೇಳಿದರು.
ಸಮೀಪದ ಅರಟಾಳ-ಬಾಡಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ 2023-24ನೇ ಸಾಲಿನ ತೆಲಸಂಗ ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗ ಮಟ್ಟದ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಮನೋದೈಹಿಕವಾಗಿ ಸದೃಢವಾಗಿ ಬೆಳೆಯಲು ಅನುಕೂಲವಾಗುತ್ತದೆ. ಕ್ರೀಡೆಯಲ್ಲಿ ಸೋಲು- ಗೆಲುವು ಸ್ವಾಭಾವಿಕ. ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿನತ್ತ ಮುಖ ಮಾಡಬೇಕು ಎಂದರು.
ಸಿಆರ್‌ಪಿ ಶ್ರೀಶೈಲ ಭಜಂತ್ರಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿದರೆ ಜ್ಞಾಪಕಶಕ್ತಿ ಹೆಚ್ಚುತ್ತದೆ ಎಂದರು.
ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಾ ಮುಧೋಳ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಮಮದಾಪೂರ, ಭೀಮಪ್ಪ ಡಂಗಿ, ಮುಖ್ಯಶಿಕ್ಷಕ ಎಂ.ಎಸ್. ಮಡಿವಾಳ, ಗ್ರಾಪಂ ಸದಸ್ಯರಾದ ಸಿದ್ದು ಹಳ್ಳಿ, ರೇವಪ್ಪ ತೇಲಿ, ಶಿವಾನಂದ ನೇಮಗೌಡ, ಸಿದ್ದು ದಳವಾಯಿ, ಶಿಕ್ಷಕರಾದ ಗಫೂರ ಮುಲ್ಲಾ, ಎಂ.ಎಸ್. ಸಕ್ರಿ, ಎಸ್.ಒ.ಬೆಳಂಕಿ, ಎಸ್.ಡಿ. ಪೂಜಾರಿ, ಆರ್.ಎಂ.ಡೋಣಿ, ಶಿಕ್ಷಕಿಯರಾದ ಎಸ್.ಎ.ಗಡದ, ಶೈಲಾ ಬಿಜ್ಜರಗಿ ಇತರರಿದ್ದರು.