ಕೋಲಾರ: ಪಠ್ಯವನ್ನು ಪ್ರಧಾನವಾಗಿರಿಸಿಕೊಳ್ಳದ ವಿಮರ್ಶೆ ವಿಮರ್ಶೆಯೇ ಅಲ್ಲ. ಅದು ಎಂದೂ ಕೃತಿ ನಿಷ್ಠವಾಗಿರುವುದಿಲ್ಲ. ಹೀಗಾಗಿ ಇಂದಿನ ವಿಮರ್ಶೆ ಸಾಂಸ್ಕೃತಿಕ ವಿವೇಚನೆಯನ್ನು ಕಳೆದುಕೊಂಡಿದೆ ಎಂದು ವಿಮರ್ಶಕ, ಸಾಹಿತಿ ಆರ್.ದಿಲೀಪ್ ಕುಮಾರ್ ಅಭಿಪ್ರಾಯ ಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಓದುಗ -ಕೇಳುಗ -ನಮ್ಮ ನಡೆ ಕಾರ್ಯಕ್ರಮದಲ್ಲಿ ಕನ್ನಡದ ವಿಶಿಷ್ಟ ವಿಮರ್ಶಕ ಜಿ.ಎಚ್.ನಾಯಕರ ಕೃತಿ 'ಸಾಕ್ಷಿ ಸಾಕ್ಷಿ' ಹಾಗೂ ಅದರ ವಿಮರ್ಶೆ ಕುರಿತಂತೆ ವಿಶ್ಲೇಷಿಸಿ ಮಾತನಾಡಿದರು.
ನೆರೆ ಭಾಷೆಗಳಾದ ತೆಲುಗು, ತಮಿಳು, ಮಲಯಾಳಂ ಸಾಹಿತ್ಯಕ್ಕಿಂತ ಕನ್ನಡದಲ್ಲಿ ಭಿನ್ನವಾದ ಸಾಹಿತ್ಯಕ ವಿನಯ ಇದೆ. ಜಿ.ಎಚ್.ನಾಯಕರು ಇದನ್ನು ಪಂಪನಿಂದ ಹಿಡಿದು ಅನೇಕ ಸಾಹಿತ್ಯದಲ್ಲಿ ಸರಿಯಾಗಿ ಗುರುತಿಸಿದ್ದಾರೆ. ನಾಯಕರದ್ದು ನೈತಿಕತೆಯನ್ನೇ ಮುಖ್ಯವಾಗಿರಿಸಿಕೊಂಡ ವಿಮರ್ಶೆಯ ಮಾರ್ಗ. ಅವರು ಬರಹಗಾರನಿಗಿಂತ ಬರಹ ದೊಡ್ಡದು ಎಂದು ನಂಬಿದ್ದರು. ಪದ ಬಳಕೆಯ ಬಗ್ಗೆ ತೀವ್ರ ಎಚ್ಚರವಹಿಸಿದ್ದರು ಎಂದರು.
ಸ್ವ ವಿಮರ್ಶೆಗೂ ಒಳಪಡಿಸಿಕೊಳ್ಳುವ ನಾಯಕರು ಈ ನಿಟ್ಟಿನಲ್ಲಿ ತಮ್ಮ ಗುರು ಡಿಎಲ್‌ಎನ್ ಅವರನ್ನೇ ಮರು ವ್ಯಾಖ್ಯಾನಕ್ಕೆ ಒಳಪಡಿಸುವ ಎದೆಗಾರಿಕೆ ತೋರಿದ್ದಾರೆ. ವಿಮರ್ಶೆಯ ಹಾದಿಯಲ್ಲಿ ಪಠ್ಯವನ್ನು ಮುಖ್ಯವಾಗಿರಿಸಿಕೊಂಡ ನಾಯಕರದ್ದು ಕನ್ನಡಕ್ಕಾಗಿ ಬೀದಿಗಿಳಿದು ಬಹಿರಂಗವಾಗಿ ಮಾತನಾಡಿದ ವ್ಯಕ್ತಿತ್ವ. ವ್ಯಕ್ತಿನಿಷ್ಠೆಗಿಂತ ಪಠ್ಯ ನಿಷ್ಠೆ ತೋರಿದ ಅವರ ವಿಮರ್ಶೆಗಳು ಕನ್ನಡಕ್ಕೆ ಶ್ರೇಷ್ಠ ವಿಮರ್ಶಕ ಮಾರ್ಗವೆನಿಸಿಕೊಂಡಿದೆ. ಆದರೆ ಕನ್ನಡ ಸಾಂಸ್ಕೃತಿಕ ಲೋಕ ಅವರಿಗೆ ಸಲ್ಲಬೇಕಾದ ಸ್ಥಾನವನ್ನು ಕಲ್ಪಿಸಿಲ್ಲ. ಶ್ರೇಷ್ಠವೆನಿಸಿದ ಅವರ ಜೀವನ ಚರಿತ್ರೆಯ ಸಂಪುಟಗಳನ್ನು ಅಕಾಡೆಮಿ ಪ್ರಕಟಿಸಬೇಕಾದ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕಥೆಗಾರ ಹಾಗೂ ಸಹ ಪ್ರಾಧ್ಯಾಪಕ ಡಾ.ಅಮರೇಂದ್ರ ಹೊಲ್ಲಂಬಳ್ಳಿ ಅವರು ಮಾತನಾಡಿ ನಾಯಕರ ವಿಮರ್ಶೆಯಲ್ಲಿನ ವಿನಯವಂತಿಕೆ ಎಂದರೆ ತಾಂತ್ರಿಕ ಸ್ಪಷ್ಟತೆ, ನಿರ್ಭೀತಿ , ತನ್ನ ತಿಳಿವಿನ ಮಿತಿ ಹಾಗೂ ಎಚ್ಚರಗಳೆ ಆಗಿವೆ. ಜಿಹೆಚ್‌ಎನ್ ವಿಮರ್ಶೆಗಷ್ಟೇ ಅರ್ಪಿಸಿಕೊಂಡ ಜೀವ. ಅವರ ಕಠೋರ ನಿಲುವು, ಅಂತರ್ಮುಖತೆಗಳಿಂದಲೇ ಅವರಿಗೆ ದಕ್ಕಬೇಕಿದ್ದ ಸಾಮಾಜಿಕ ಸಾಹಿತ್ಯಕ ಮನ್ನಣೆ ಸಿಗಲಿಲ್ಲ. ಇದಕ್ಕೆ ಮತ್ತೊಂದು ಕಾರಣ ಅವರೇ ಹಾಕಿಕೊಂಡ ಚೌಕಟ್ಟು ಅಥವಾ ಮಿತಿ ಆಗಿದ್ದಿರಬಹುದು ಎಂದರು.
ಮೌಖಿಕ ಪರಂಪರೆಯನ್ನು ಆಧರಿಸಿದ ಅವರ ವಿಮರ್ಶಾ ವಿಧಾನ ಇಂದಿಗೂ ಪ್ರಸ್ತುತ. ಅವರ ಪ್ರತಿ ಲೇಖನದಲ್ಲೂ ಕಾಣಿಸುವ ಅಡಿ ಟಿಪ್ಪಣಿಗಳು ಅವರ ಅಧಿಕೃತ ಸಮರ್ಥನೆಗೆ ಸಾಕ್ಷಿಯಾಗಿದೆ ಹಾಗೂ ಅಪ್ಪಟ ತೌಲನಿಕ ವಿಮರ್ಶೆಗೆ ನಾಯಕರು ಒಂದು ನಿದರ್ಶನವಾಗಿದ್ದಾರೆ ಎಂದರು.
ಸಂವಾದದಲ್ಲಿ ಪಾಲ್ಗೊಂಡ ವಿಮರ್ಶಕ ಡಾ. ವಿ.ಚಂದ್ರಶೇಖರ ನಂಗಲಿ ಕುವೆಂಪು ಕೂಡ ಗುರುವನ್ನು ಮೀರುವ ಪ್ರಯತ್ನ ಮಾಡಿದ್ದಾರೆ. ಜಿಹೆಚ್ ನಾಯಕರು ಕುವೆಂಪು ಅವರ ಮುಂದುವರಿಕೆ.ಈ ನಿಟ್ಟಿನಲ್ಲಿ ಸಾಹಿತ್ಯಕ ತತ್ವಗಳ ಆಧಾರದಲ್ಲಿ ಪಿತೃಹತ್ಯೆ,ಗುರು ಹತ್ಯೆ, ಹಾಗೂ ಸ್ವಹತ್ಯೆಗಳ ಮೂಲಕ ಗುರುವನ್ನು ಹೇಗೆ ಮೀರಬಹುದು ಎಂಬುದನ್ನು ಜಿಎಹ್‌ಎನ್ ತೋರಿಸಿಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಚೀಮನಹಳ್ಳಿ ಮಂಜುನಾಥ್, ಏಜಾಜ್ ಪಾಷ, ಕೆ.ಪಿ.ಮಂಜುನಾಥ, ಡಾ.ಸಿ.ಎ.ರಮೇಶ್, ಪ್ರೊಫೆಸರ್ ಮುನಿರತ್ನಪ್ಪ, ಸ.ರಘುನಾಥ, ಪತ್ರಕರ್ತ ಸಿ.ಎಂ.ಮುನಿಯಪ್ಪ, ಸುಬ್ಬಲಕ್ಷ್ಮಿ, ಹೇಮಾವತಿ ಶ್ರೀನಿವಾಸ್, ಉಪನ್ಯಾಸಕ ಜೆಜಿ.ನಾಗರಜ್, ಕೊಂಡರಾಜನಹಳ್ಳಿ ಮಂಜುಳ ಮುಂತಾದವರಿದ್ದರು.