ಆನೇಕಲ್: ರಾಜ್ಯದಲ್ಲಿ ಮುಂದಿನ ವರ್ಷದಿಂದ ಪಠ್ಯಪುಸ್ತಕದಲ್ಲಿ ಯೋಗ ಶಿಕ್ಷಣ ಅಳವಡಿಸುವ ಮೂಲಕ ಶಾಲಾ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಹೇಳಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ತಾಲೂಕಿನ ಜಿಗಣಿಯ ಎಸ್.ವ್ಯಾಸ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಯೋಗ ಸಂಶೋಧನೆ ಕುರಿತು 24ನೇ ಅಂತಾರಾಷ್ಟ್ರೀಯ ಸಮಾವೇಶ ಹಾಗೂ ಸಮಗ್ರ ಆರೋಗ್ಯ ತಂತ್ರಜ್ಞಾನ ಕುರಿತು ಸಿದ್ಧಪಡಿಸಿದ್ದ ‘‘ಆಯು’ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದರು.
ಪ್ರಸಕ್ತ ವರ್ಷದಲ್ಲಿ ಶಾಲಾ-ಕಾಲೇಜುಗಳ ಪಠ್ಯದಲ್ಲಿ ಯೋಗವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವ ಪಾಠವನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವರ್ಷ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರನ್ನು ನೇಮಕ ಮಾಡಿ ಯೋಗ ತರಗತಿ ಆರಂಭಿಸಿ ಶಿಕ್ಷಣದಲ್ಲಿ ಕ್ರಾಂತಿ ತಂದು ಬಾಲ್ಯದಿಂದಲೇ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಸಾಧಿಸುವ ಛಲ ಇದ್ದರೆ ಬದಲಾವಣೆ ಸಾಧ್ಯ. ಸಮಯವನ್ನು ವ್ಯರ್ಥ ಮಾಡಬಾರದು. ಇತ್ತೀಚಿಗೆ ಮನುಷ್ಯನಲ್ಲಿ ಒತ್ತಡ ಹೆಚ್ಚಾಗಿ ನಗು ಮಾಯವಾಗುತ್ತಿದೆ. ಚಿಂತೆಯಿಂದ ಮನುಷ್ಯ ಒತ್ತಡಕ್ಕೆ ಸಿಲುಕಿಕೊಳ್ಳುತ್ತಿದ್ದಾನೆ. ನಮ್ಮಲ್ಲಿ ಮಗುವಿನಂತಹ ಮುಗ್ಧತೆ ಹಾಗೂ ಕುತೂಹಲ ಇದ್ದಾಗ ಮಾತ್ರ ಹೆಚ್ಚು ಕಾಲ ಜೀವನ ಸಾಗಿಸಲು ಸಾಧ್ಯ ಎಂದರು.
ಉತ್ತಮ ಆರೋಗ್ಯಕ್ಕೆ ಆ್ಯಪ್: ಎಸ್.ವ್ಯಾಸ ವಿವಿ ಇತ್ತೀಚೆಗೆ ರೋಗಮುಕ್ತ ಭಾರತ ಪರಿಕಲ್ಪನೆಯಡಿ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ 90 ದಿನಗಳ ‘ಸ್ವಸ್ಥ ಶಕ್ತಿ’ ಕಾರ್ಯಕ್ರಮಕ್ಕೆ ಇತ್ತೀಚೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಚಾಲನೆ ನೀಡಿದ್ದರು. ‘ಆಯು’ ಆ್ಯಪ್‌ನಲ್ಲಿ ಕೃತಕ ಬುದ್ಧಮತ್ತೆಯಂತಹ ಆಧುನಿಕ ತಂತ್ರಜ್ಞಾನ ಅಳವಡಿಸಿದ್ದು, ಎಸ್.ವ್ಯಾಸ ವಿವಿಯ ವೈದ್ಯರು 750ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಆಧಾರದ ಮೇಲೆ ಇದನ್ನು ಸಿದ್ಧಪಡಿಸಿದ್ದಾರೆ ಎಂದು ಸಿಎಂ ತಿಳಿಸಿದರು. ವಿಶೇಷವಾಗಿ ಹೃದಯ ತೊಂದರೆ, ಪಿಸಿಒಎಸ್, ಅಧಿಕ ರಕ್ತದೊತ್ತಡ, ಮೂಳೆ ಸಂಬಂಧಿ ಸಮಸ್ಯೆ, ಬೆನ್ನುನೋವು, ಅಸ್ತಮ, ಖಿನ್ನತೆ, ಯೋಗಕ್ಷೇಮ ಪರಿಹಾರ, ಸಮಗ್ರ ಯೋಗ ವಿಧಾನ, ಧ್ಯಾನ, ಪ್ರಾಣಯಾಮ, ವಿಶ್ರಾಂತಿ ಪಡೆಯುವ ವಿಧಾನಗಳನ್ನು ಆ್ಯಪ್ ಮೂಲಕ ಕಲಿಸಿಕೊಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಎಸ್.ವ್ಯಾಸ ವಿವಿ ಕುಲಪತಿ ಡಾ.ಎಚ್.ಆರ್. ನಾಗೇಂದ್ರ ಮಾತನಾಡಿ, ದಶಕಗಳ ಕಾಲ ನಡೆಸಿದ ಸಂಶೋಧನೆ ಫಲದಿಂದ ಆಯು ಆ್ಯಪ್ ಸಿದ್ಧಪಡಿಸಲಾಗಿದ್ದು, ಇದು ಯೋಗ ವಿಜ್ಞಾನದ ಅಂಶ ಹಾಗೂ ಚಿಕಿತ್ಸಾ ವಿಧಾನಗಳನ್ನು ಅಡಕಗೊಳಿಸಲಾಗಿದೆ. ಎಸ್.ವ್ಯಾಸ ವಿವಿ ಸಾಮರ್ಥ್ಯ ಮತ್ತು ರಿಸೆಟ್ ತಂತ್ರಜ್ಞಾನದ ಪರಿಣಿತರು ನೀಡುತ್ತಿರುವ ಯೋಗ ಕೇಂದ್ರಿತ ಪರಿಹಾರ ಆರೋಗ್ಯ ಕೇತ್ರದಲ್ಲಿ ಕ್ರಾಂತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಿಸೆಟ್ ಟೆಕ್ ಸಂಸ್ಥೆ ಸಂಸ್ಥಾಪಕ ಕರನ್ ತಲ್ರೆಜ ಮಾತನಾಡಿ, ಲುಕೆ ಕೌಟಿನ್ಹೋ ಮತ್ತು ವಂಶಿಕೃಷ್ಣ ತಲಸಿಲ ನೇತೃತ್ವದಲ್ಲಿ ಆಯು ಆ್ಯಪ್ ಸಿದ್ಧಪಡಿಸಲಾಗಿದೆ. ಬಹುತೇಕ ರೋಗಗಳು ಒತ್ತಡ ಮತ್ತು ಜೀವನ ಶೈಲಿಯಿಂದ ಬರುತ್ತವೆ. ಇದಕ್ಕಾಗಿ ಯೋಗ ಮತ್ತು ಧ್ಯಾನದ ವಿಧಾನಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಕಾಲ ಕ್ರಮೇಣ ತಾವಾಗಿಯೇ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಪ್ರಪಂಚದಲ್ಲಿ ಎಸ್.ವ್ಯಾಸ ಯೋಗ ಕೇಂದ್ರ ಇತಿಹಾಸ ಸೃಷ್ಟಿ ಮಾಡಲು ಪ್ರಮುಖ ಕಾರಣ ನರೇಂದ್ರ ಮೋದಿ ಅವರು. ಇಂದು ಜಾಗತಿಕ ಮಟ್ಟದಲ್ಲಿ ಯೋಗಕ್ಕೆ ತನ್ನದೇ ಆದ ಶಕ್ತಿ ಸಾಮರ್ಥ್ಯ ಬರಬೇಕಾದರೆ ಮೋದಿ ಅವರು ಕೈಗೊಳ್ಳುತ್ತಿರುವ ಕಾರ್ಯಕ್ರಮಗಳು ಎಂದು ಬಣ್ಣಿಸಿದರು.
ಗ್ಲೊಬಲ್ ಹಿಂದು ಹೆರಿಟೇಜ್ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ರಾವ್ ಮಾತನಾಡಿ, ನಮ್ಮ ಧರ್ಮದ ಉಳಿವಿಗಾಗಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದು, ಅನ್ನದಾನ, ಘರ್ ವಾಪಸಿ, ಬಾಲ ಸಂಸ್ಕಾರ, ಗೋ ರಕ್ಷಣೆಯಂತಹ ಹಲವಾರು ಕಾರ್ಯಕ್ರಮಗಳನ್ನು ವಿವಿಧ ರಾಜ್ಯಗಳಲ್ಲಿ ರೂಪಿಸಲಾಗುತ್ತಿದೆ ಎಂದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಐಜಿಪಿ ಚಂದ್ರಶೇಖರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠ ವಂಶಿಕೃಷ್ಣ, ವಿವಿ ಸಿಬ್ಬಂದಿ ಡಾ.ವಿ.ಪ್ರಕಾಶ್ ರಾವ್, ಕರಣ್ ತೈರೇಜಾ ಮತ್ತಿತರರು ಇದ್ದರು.
ಆಯು ಆಪ್ ಮಾಹಿತಿ: ಸಮಗ್ರ ಆರೋಗ್ಯ ಹಾಗೂ ರೋಗ ನಿರೋಧ ಶಕ್ತಿ ವೃದ್ಧಿಸುವ ಉದ್ದೇಶದಿಂದ 24ನೇ ಇನ್ಕೋಫೈರ ಸಂಸ್ಥೆಯಿಂದ ಈ ಆ್ಯಪ್ ಸಿದ್ಧಪಡಿಸಿದ್ದು, ಇದು ಯೋಗ ಮತ್ತು ಧ್ಯಾನ ಕುರಿತು ಸರಿಯಾದ ವಿಧಾನದ ಮೂಲಕ ದೀರ್ಘಕಾಲೀನ ಕಾಯಿಲೆಗಳು ಮತ್ತು ಜೀವನ ಶೈಲಿಯ ಅಸ್ವಸ್ಥತೆಗಳನ್ನು ಪರಿಹರಿಸುವ ಅಪ್ಲಿಕೇಶನ್ ಹೊಂದಿದೆ. ವಿವಿಧ ಭಾಷೆಗಳಲ್ಲಿ ಈ ಆ್ಯಪ್ ಲಭ್ಯವಿದ್ದು, ಐದು ವರ್ಷಗಳಲ್ಲಿ ದೀರ್ಘ ಕಾಯಿಲೆಗಳಿಂದ ಬಳಲುತ್ತಿರುವ 50 ಲಕ್ಷ ಜನರನ್ನು ತಲುಪುವ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ. ಸಾಂಪ್ರದಾಯಿಕ ವೈದ್ಯಕೀಯ ಕ್ರಮಗಳ ಮೂಲಕ ರೋಗದ ಮೂಲ ಅರಿತು ಮತ್ತೆ ಉತ್ತಮ ಆರೋಗ್ಯ ಪಡೆಯಲು ಅನುಸರಿಸಬೇಕಾದ ವಿಧಾನ, ಜೀವನಶೈಲಿ ರೂಢಿಸಿಕೊಳ್ಳುವ ಕುರಿತು ಮಾರ್ಗದರ್ಶನ ಆ್ಯಪ್‌ನಲ್ಲಿದೆ.