ಜಿಲ್ಲೆ

ಪಠ್ಯದೊಂದಿಗೆ ಜೀವನ ಪಾಠ

ಶಿರಸಿ: ಸಾರಿಗೆ, ದೂರವಾಣಿ, ರಸ್ತೆಯಂಥ ಮೂಲಸೌಕರ್ಯ ವಂಚಿತ ಗ್ರಾಮದ ಶಾಲೆಯೊಂದು ಶಿಕ್ಷಕರು ಹಾಗೂ ಸ್ಥಳೀಯರ ಪ್ರಯತ್ನದಿಂದ ಹೊಸ ರೂಪ ಪಡೆದಿದೆ. ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಸ್ವಾವಲಂಬನೆಯ ಜೀವನ ಪಾಠ ಕಲಿಸಲಾಗುತ್ತಿದೆ.

ತಾಲೂಕು ಕೇಂದ್ರದಿಂದ 25 ಕಿ.ಮೀ. ಹಾಗೂ ಗ್ರಾಮ ಪಂಚಾಯಿತಿಯಿಂದ 8 ಕಿ.ಮೀ. ದೂರದಲ್ಲಿರುವ ಕೆಳಾಸೆ ಕುಗ್ರಾಮವಾಗಿದೆ. ಕೂಲಿ ಮಾಡಿ ಜೀವನ ಸಾಗಿಸುವ ಕರೆ ವಕ್ಕಲಿಗ ಸಮುದಾಯದ ಜನರಿರುವ ಇಲ್ಲಿ ಶಿಕ್ಷಣ, ಕಲಿಕೆ ದೂರದ ಮಾತು. ಇಂಥ ಸನ್ನಿವೇಶದಲ್ಲಿಯೂ ಇಲ್ಲಿನ ಶಾಲೆ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಮ್ಮಿ ಇಲ್ಲದಂತೆ ಗಮನ ಸೆಳೆಯುತ್ತಿದೆ. 21 ಮಕ್ಕಳಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸದ್ಯ ತಾಲೂಕಿನ ಎಲ್ಲ ಶಾಲೆಗಳಿಗೆ ಮಾದರಿಯಾಗಿದೆ. ಇಬ್ಬರು ಶಿಕ್ಷಣಸ್ನೇಹಿ ಶಿಕ್ಷಕರು, ಪಾಲಕರ ಕ್ರಿಯಾಶೀಲ ನಡೆಯಿಂದ ಇಂಥದ್ದೊಂದು ಸಾಧನೆ ಸಾಧ್ಯವಾಗಿದೆ.

ಪಾಲಕರ ಸಹಕಾರ: ಮಳೆಗಾಲದಲ್ಲಿ ಸೋರಿ ಕಳೆಗುಂದಿದ ಶಾಲೆಯ ಸ್ಥಿತಿ ಕಂಡ ಶಿಕ್ಷಕ ಕೃಷ್ಣ ನಾಯ್ಕ ಅವರು ಸ್ನೇಹಿತರು, ಮಕ್ಕಳ ಪಾಲಕರಲ್ಲಿ ವಿಷಯ ಪ್ರಸ್ತಾಪಿಸಿ ಕೈಲಾದ ಸಹಕಾರ ನೀಡುವಂತೆ ವಿನಂತಿಸಿದ್ದರು. ಪರಿಣಾಮ ಶಾಲೆಯ 5 ಕೊಠಡಿಗಳಿಗೆ ಸುಣ್ಣ, ಬಣ್ಣ ಹಚ್ಚಲಾಯಿತು. ಶಾಲೆಯ ಎಲ್ಲ ಶಿಕ್ಷಕರ ಪ್ರಯತ್ನದ ಫಲವಾಗಿ ಕೊಠಡಿಯೊಳಗೆ ವಿವಿಧ ಮಾಹಿತಿ ಫಲಕಗಳು ದಿನದಿಂದ ದಿನಕ್ಕೆ ಹೆಚ್ಚಿ ಶಾಲೆ ಮಾಹಿತಿ ಕಣಜವಾಗಿ ಮಾರ್ಪಟ್ಟಿತು. ಸೋರುತ್ತಿದ್ದ ಛಾವಣಿಗೆ ಸರ್ಕಾರದ ನಿಧಿಯೊಂದರಿಂದ ಮುಚ್ಚಿಗೆಯೂ ಆಯಿತು. ಶಿಕ್ಷಣದೆಡೆ ಅದಮ್ಯ ಪ್ರೀತಿಯಿರುವ ಗ್ರಾಮಸ್ಥರ ಸಹಕಾರದಿಂದ ನೋಡನೋಡುತ್ತಿದ್ದಂತೆ ಶಾಲೆ ಸೌಲಭ್ಯಪೂರ್ಣವಾಯತು. ಇದರ ಫಲವಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಿತು.

ಮನುಷ್ಯ ಮತ್ತು ಮಣ್ಣಿನ ಸಂಬಂಧ: ಬಿಡುವಿನ ಅವಧಿಯಲ್ಲಿ ಶಿಕ್ಷಕರು, ಮಕ್ಕಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರ ಸಹಕಾರದಲ್ಲಿ ಕೈತೋಟ ನಿರ್ವಿುಸಿ ತರಕಾರಿ ಬೆಳೆಯಲಾಗುತ್ತಿದೆ. ಶಾಲೆ ಅಂಗಳದಲ್ಲಿ ತರಕಾರಿ ಬೆಳೆಸುವ ಮೂಲಕ ಮಕ್ಕಳಿಗೆ ಮನುಷ್ಯ ಮತ್ತು ಮಣ್ಣಿನ ಸಂಬಂಧವನ್ನು ತಿಳಿಸಲಾಗುತ್ತಿದೆ. ಶಾಲೆಯ ಬಿಸಿಯೂಟಕ್ಕೆ ಬೇಕಾಗುವ ಅರ್ಧದಷ್ಟು ತರಕಾರಿಗಳನ್ನು ಇಲ್ಲಿಯೇ ಬೆಳೆಸುತ್ತಿದ್ದಾರೆ. ಮಕ್ಕಳು ಗಿಡಗಳಿಗೆ ನೀರು ಹಾಯಿಸಿ ಅವುಗಳ ನಿರ್ವಹಣೆ ಮಾಡುತ್ತಾರೆ. ಆಯಾ ಹಂಗಾಮಿಗೆ ಹೊಂದಾಣಿಕೆಯಾಗುವಂತೆ ಬೀನ್ಸ್, ತೊಂಡೆ, ಪಪ್ಪಾಯಿ, ಮೂಲಂಗಿ, ಬದನೆ, ಹರಿವೆ, ಟೊಮ್ಯಾಟೊ, ಪಾಲಕ್ ಇತರ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಶಾಲೆ ಆವರಣದಲ್ಲಿ ಸದ್ಯ ಬಾಳೆ ಕೃಷಿಯೂ ಜೋರಾಗಿದೆ. ಪಾಠದೊಂದಿಗೆ ಜೀವನ ಕೌಶಲವನ್ನೂ ಇಲ್ಲಿ ಮಕ್ಕಳಿಗೆ ಕಲಿಸಲಾಗುತ್ತಿದೆ.

ಎಲ್ಲ ಸೌಲಭ್ಯವನ್ನೂ ಸರ್ಕಾರವೇ ನೀಡಬೇಕು ಎಂದು ಕಾಯುವ ಬದಲು ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡರೆ ಸೌಲಭ್ಯ ತಂತಾನೆ ಸಿಗುತ್ತದೆ. ಶಾಲಾಭಿವೃದ್ಧಿ ಸಮಿತಿ ಪ್ರಮುಖರು, ಊರವರು, ಎಲ್ಲ ಶಿಕ್ಷಕರ ಸಹಕಾರ ಮನೋಭಾವದಿಂದ ಇವೆಲ್ಲ ಸಾಧ್ಯವಾಗಿದೆ. ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ನಮ್ಮ ಉತ್ಸಾಹ ಇಮ್ಮಡಿಗೊಳಿಸಿದೆ. | ಕೃಷ್ಣ ನಾಯ್ಕ ಕೆಳಾಸೆ ಶಾಲೆ ಮುಖ್ಯಶಿಕ್ಷಕ
ಸಮಯ ಸಿಕ್ಕಾಗ ತರಕಾರಿ ಬೆಳೆಯುವ ಜತೆಗೆ ಅವುಗಳ ಬೆಳವಣಿಗೆ ಹಂತವನ್ನೂ ವೀಕ್ಷಿಸಿ ಅರಿವು ಬೆಳೆಸಿಕೊಳ್ಳುತ್ತೇವೆ. ನಾವೇ ಬೆಳೆಸಿದ ತರಕಾರಿ ತಿನ್ನುವಾಗ ತೃಪ್ತಿಯಾಗುತ್ತದೆ. | ವಿದ್ಯಾ ಗೌಡ ವಿದ್ಯಾರ್ಥಿನಿ