ಜಿಲ್ಲೆ

ಪಠ್ಯದಲ್ಲಿ ಭಾರತೀಯ ಕೃಷಿ ಅಳವಡಿಸಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೃಷಿ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಮೊದಲ ಬಾರಿಗೆ ಕೃಷಿ ಮೇಳದಲ್ಲಿ ಕನ್ನಡ ಕೃಷಿ ಗೋಷ್ಠಿ ಆಯೋಜಿಸುವ ಮೂಲಕ ಕನ್ನಡದಲ್ಲಿ ಕೃಷಿ ಕುರಿತು ಉತ್ತಮ ಲೇಖನ ಬರೆದವರಿಗೆ ಪ್ರಶಸ್ತಿ ನೀಡಲು ಪ್ರಸಕ್ತ ಸಾಲಿನಿಂದ ನಾಂದಿ ಹಾಡಲಾಗಿದೆ.
ನಗರದ ಕೃವಿವಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸುತ್ತೂರು ಕೆವಿಕೆ ಹಿರಿಯ ವಿಜ್ಞಾನಿ ಡಾ. ಎಚ್.ವಿ. ದಿವ್ಯಾ ಅವರಿಗೆ ’ಡಾ. ಚನ್ನವೀರ ಕಣವಿ ಕೃಷಿ ಲೇಖನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣಿಕೆ ಒಳಗೊಂಡಿದೆ.
ಸಹಾಯಕ ಕೃಷಿ ನಿರ್ದೇಶಕ ಡಾ. ಚೆನ್ನಪ್ಪ ಅಂಗಡಿ ಮಾತನಾಡಿ, ಕೃಷಿಕ ಹಾಗೂ ಕನ್ನಡಿಗ ಅನೇಕ ಸವಾಲು ಎದುರಿಸುತ್ತಿದ್ದಾರೆ. ಕನ್ನಡ ಭಾಷೆ ಮತ್ತು ಕೃಷಿಯ ಇಂದಿನ ಸ್ಥಿತಿ ಅರಿತು ಅವುಗಳ ಅಸ್ಮಿತೆ ಉಳಿಸುವ ಕೆಲಸವಾಗಬೇಕು. ಹೊಸ ತಳಿ ಬೀಜ, ಬೇಸಾಯ ಪದ್ಧತಿ, ತಾಂತ್ರಿಕತೆ ಬಳಕೆ ಮಾಹಿತಿ ಕೊರತೆಯಿಂದ ಕೃಷಿ ಅವನತಿಯತ್ತ ಸಾಗಿದ್ದರೆ, ಓದುಗರ ಕೊರತೆ, ಆಂಗ್ಲ ವ್ಯಾಮೋಹ ಕನ್ನಡ ಭಾಷೆ ಮರೆಸುತ್ತಿರುವುದರಿಂದ ಕನ್ನಡ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ಬಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿದ ಡಾ. ಎಚ್.ವಿ. ದಿವ್ಯಾ ಮಾತನಾಡಿ, ಕನ್ನಡ ಭಾಷೆಯೇ ಗೊತ್ತಿಲ್ಲದ ವ್ಯಕ್ತಿಗಳು ಕೃಷಿ ವಿಜ್ಞಾನಿ ಆಗುವುದು ವ್ಯರ್ಥ. ಇಂದು ಕೃಷಿ ಕ್ಷೇತ್ರ ಪರಿಚಯಕ್ಕೆ ಸಾಕಷ್ಟು ಮಾಧ್ಯಮಗಳಿವೆ. ಆದಾಗ್ಯೂ ಪತ್ರಿಕೋದ್ಯಮ ವಿಭಾಗದಲ್ಲಿ ಕೃಷಿ ಪದವಿ ಕೋರ್ಸ್ ಆರಂಭಿಸಬೇಕು. ಇದರ ಮೂಲಕ ರೈತರ ಸಮಸ್ಯೆ ಅರಿತು, ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವ ಕೆಲಸವನ್ನು ಪದವೀಧರರು ಮಾಡಬೇಕಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಉಪನ್ಯಾಸಕ ರವಿತೇಜ ಅಬ್ಬಿಗೇರಿ, ಡಾ.ವಿ.ಎಸ್.ಗಿಡ್ನವರ ಮಾತನಾಡಿದರು. ಕುಲಪತಿ ಡಾ. ಆರ್.ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶ್ರೀನಿವಾಸ ಕೋಟ್ಯಾನ, ವೈ.ಎನ್. ಪಾಟೀಲ, ಮಲ್ಲೇಶ ಪಿ., ಎಲ್.ಎಸ್. ಅಜಗಣ್ಣವರ, ಡಾ. ಪಿ.ಎಸ್. ಹೂಗಾರ, ಡಾ. ಸುರೇಖಾ ಸಂಕನಗೌಡರ, ಡಾ. ಬಿ.ಡಿ. ಬಿರಾದಾರ, ಇತರರು ಇದ್ದರು.