ಯಾದಗಿರಿ: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪರಿಣಿತರಾಗುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಡಿ.ದೇವರಾಜ ಅರಸು ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿ ಹೊಂದುವ ಮೂಲಕ ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಹಿಂದುಳಿದ ವರ್ಗದ ಹರಿಕಾರ ದೇವರಾಜ ಅರಸು ಹೆಸರಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ ಡಾ.ಭೀಮಣ್ಣ ಮೇಟಿ ಸಾಧನೆ ದೊಡ್ಡದು. ಸಣ್ಣ ವಯಸ್ಸಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ವಿದ್ಯೆಯ ಜತೆಗೆ ಉದ್ಯೋಗವನ್ನು ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಸಂಸ್ಥಾಪಕ ಡಾ.ಮೇಟಿ ಮಾತನಾಡಿ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಹೊಂದಿರಬೇಕಾದರೆ ಕ್ರೀಡೆಗಳು ಅವಶ್ಯಕ. ಹೀಗಾಗಿ ನಮ್ಮ ಸಂಸ್ಥೆಯಿಂದ ಪ್ರತಿವರ್ಷ ಕ್ರೀಡಾಕೂಟ ಆಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಸಂಸ್ಥೆಯಲ್ಲಿ ಶಿಕ್ಷಕರು ಕಳೆದ 15 ದಿನಗಳಿಂದ ಯೋಗ,ಧ್ಯಾನ, ಕ್ರೀಡೆ, ಕರಾಟೆ ಹಾಗೂ ನೃತ್ಯಗಳನ್ನು ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ ಎಂದು ಹೇಳಿದರು.
ಯಾದಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ್ ನಾಯಕ, ಜಿಪಂ ಮಾಜಿ ಉಪಾಧ್ಯಕ್ಷ ಹನುಮನಗೌಡ ಮರಕಲ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಚೆನ್ನಪ್ಪಗೌಡ, ಕಾಡಯ್ಯ, ಸ್ವಾಮಿ, ಶರಣು ಪಾಟೀಲ್, ದೇವೇಂದ್ರಪ್ಪ ಮೇಟಿ, ಶಾಂತು ಪಾಟೀಲ್ ಕಾಡಂಗೇರ, ಶರಭಣ್ಣ ರಸ್ತಾಪುರ ಇದ್ದರು.