ಭಾಲ್ಕಿಯ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪಿಯು ತಾಲೂಕು ಮಟ್ಟದ ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಸಿದರು. ಶ್ರೀ ಮಹಾಲಿಂಗ ದೇವರು, ಡಿಡಿಪಿಯು ಚಂದ್ರಕಾಂತ ಶಾಹಾಬಾದಕರ್ ಇತರರಿದ್ದರು. 
ಜಿಲ್ಲೆ

ಪಠ್ಯದ ಜತೆಗೆ ಕ್ರೀಡೆ ಅಗತ್ಯ

ಭಾಲ್ಕಿ: ಸರ್ವಾಂಗೀಣ ವಿಕಾಸಕ್ಕಾಗಿ ಮತ್ತು ಮಾನಸಿಕ ಸಮತೋಲಕ್ಕಾಗಿ ವಿದ್ಯಾರ್ಥಿಗಳು ಪಠ್ಯದ ಜತೆಗೆ ಆಟಗಳಲ್ಲಿ ಭಾಗವಹಿಸುವುದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಬೀದರ್, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಭಾಲ್ಕಿ ಹಾಗೂ ಶೀ ಸಂಗಮೇಶ್ವರ ಪಪೂ ಕಾಲೇಜು ಭಾಲ್ಕಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ೨೦೨೫-೨೬ನೇ ಸಾಲಿನ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಅಂದಿನ ಕಾಲಕ್ಕಿಂತ ಇಂದಿನ ಕಾಲದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿಸಲು ಯುವಕರು ವಿವಿಧ ಕ್ರೀಡೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು. ಸೋಲೇ ಗೆಲುವಿನ ಸೋಪಾನವಾಗಿರುತ್ತದೆ. ಯುವಕರು ದುಶ್ಚಟ-ದುರ್ಗುಣಗಳಿಂದ ದೂರವಿದ್ದು ಆದರ್ಶ ಜೀವನ ರೂಪಿಸಿಕೊಳ್ಳಬೇಕು. ಪರಿಸರ ಮಾಲಿನ್ಯ ತಡಗಟ್ಟಲು ಗಿಡ-ಮರ ಬೆಳೆಸುವುದು ಅಗತ್ಯ ಎಂದು ಹೇಳಿದರು.

ಶ್ರೀ ಮಹಾಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ಡಿಡಿಪಿಯು ಚಂದ್ರಕಾಂತ ಶಾಹಾಬಾದಕರ್ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಹಿರೇಮಠ ವಿದ್ಯಾಪೀಠದ ಆಡಳಿತಾಧಿಕಾರಿ ಮೋಹನರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಪುರಸಭೆ ಅಧ್ಯಕ್ಷ ಶಶಿಕಲಾ ಅಶೋಕ ,ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೊಡೆ, ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ್, ಡಿವೈಎಸ್‌ಪಿ ಶಿವಾನಂದ ಪಾಡಶೆಟ್ಟಿ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಉದ್ಯಮಿ ವಿಲಾಸ ಬಕ್ಕಾ, ಧನರಾಜ ಬಂಬಳಗೆ, ಪ್ರಾಚಾರ್ಯರಾದ ಜೈಕಾಂತ ಗಂಗೋಜಿ, ಸುಖದೇವ ಬಿರಾದಾರ, ಬಾಲಾಜಿ ವಾಡೆಕರ್ ಸೇರಿ ಕ್ರೀಡಾಪಟುಗಳು ಇದ್ದರು.

ಗುರುಕುಲ ಪಿಯು ಕಾಲೇಜು ಪ್ರಾಚಾರ್ಯ ಬಸವರಾಜ ಮೋಳಕಿರೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಸಂಗಮೇಶ್ವರ ಪಪೂ ಕಾಲೇಜು ಪ್ರಾಚಾರ್ಯ ಪ್ರವೀಣ ಹಿರೇಮಠ ಸ್ವಾಗತಿಸಿದರು. ಮದನ ಗಾಂವಕರ್ ನಿರೂಪಣೆ ಮಾಡಿದರು. ದೈಹಿಕ ಶಿಕ್ಷಕ ಅನೀಲ ಪಾಟೀಲ್ ವಂದಿಸಿದರು.

ಕ್ರೀಡಾಪಟುಗಳಿಗೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸದಾ ಸಿದ್ಧ. ಭಾಲ್ಕಿ ಟೆಕಡಿ ಹತ್ತಿರ ೧೬ ಕೋಟಿ ರೂ.ವೆಚ್ಚದಲ್ಲಿ ೧೮ ಎಕರೆ ಭೂಮಿಯಲ್ಲಿ ಸಕಲ ಆಧುನಿಕ ಸೌಲಭ್ಯವುಳ್ಳ ಕ್ರೀಡಾಂಗಣ ನಿರ್ಮಿಸಿ ಒಂದು ವರ್ಷದಲ್ಲಿ ಲೋಕಾರ್ಪಣೆಗೊಳಿಸಲು ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದೆ.

| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ