ಜಿಲ್ಲೆ

ಪಠ್ಯ ಮುಂದುವರಿಕೆ: ಸರ್ಕಾರದ ಏಕಪಕ್ಷೀಯ ತೀರ್ಮಾನಕ್ಕೆ ಖಂಡನೆ

ಹಾಸನ: ಶಾಲಾ ಪಠ್ಯಪುಸ್ತಕಗಳಲ್ಲಿ ಲೇಖಕರ ಆಗ್ರಹದಂತೆ ಕೈ ಬಿಟ್ಟಿದ್ದ ಪಠ್ಯಗಳನ್ನು, ಅವರ ಅನುಮತಿ ಇಲ್ಲದೇ ಮರು ಸೇರ್ಪಡೆ ಮಾಡಿಕೊಂಡಿರುವುದಾಗಿ ಸರ್ಕಾರ ಕಳೆದ ಅ.28 ರಂದು ಮರು ಆದೇಶ ಹೊರಡಿಸಿರುವುದು ಮಾಧ್ಯಮಗಳಿಂದ ತಿಳಿದು ಬಂದು ಆಘಾತವಾಯಿತು. ನನ್ನ ಒಪ್ಪಿಗೆ ಇಲ್ಲದಿದ್ದರೂ, ನನ್ನ ಪದ್ಯವನ್ನು ಪಠ್ಯಕ್ಕೆ ಬಳಸಿಕೊಳ್ಳಲು ನಿರ್ಧರಿಸಿರುವ ಸರ್ಕಾರದ ಏಕಪಕ್ಷೀಯ ತೀರ್ಮಾನದ, ಈ ಆಗ್ರಹಪೂರ್ವಕ ನಡೆ ತೀವ್ರ ಜುಗುಪ್ಸೆ ಹುಟ್ಟಿಸಿದೆ. ಇದು ಖಂಡನೀಯ ಎಂದು ಲೇಖಕಿ ರೂಪ ಹಾಸನ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಪಠ್ಯಪುಸ್ತಕ ಪರಿಷ್ಕರಣೆ ಹಾಗೂ ಪುನರ್ ರಚನಾ ಸಮಿತಿ 2017-18’ ರ ಅಪೇಕ್ಷೆಯಂತೆ ಪಠ್ಯಪುಸ್ತಕಕ್ಕೆ ನನ್ನ ಪದ್ಯವನ್ನು ಅಳವಡಿಸಿಕೊಳ್ಳಲು ಈ ಹಿಂದೆ ಅನುಮತಿ ನೀಡಿದ್ದೆ. ಆದರೆ ಇದೇ 2022-23ನೇ ಸಾಲಿನಲ್ಲಿ ಪಠ್ಯ ಪುಸ್ತಕಗಳ ಪುನರ್ ಪರಿಶೀಲನೆಗೆ ಸರ್ಕಾರದಿಂದ ಅನುಮತಿ ಪಡೆದ ಸಮಿತಿಯು, ನಮ್ಮ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005ರ ನೀತಿ ನಿಯಮಗಳನ್ನು ಗಾಳಿಗೆ ತೂರಿ, ಮನಬಂದಂತೆ ಹಲವು ತಿದ್ದುಪಡಿ, ಗೊಂದಲ ಪೂರಿತ/ಅನವಶ್ಯಕ ಮಾರ್ಪಾಡುಗಳನ್ನು ಮಾಡಿರುವುದಕ್ಕೆ ನನ್ನ ವಿರೋಧ ವ್ಯಕ್ತಪಡಿಸಿದ್ದೆ. ಪ್ರತಿರೋಧದ ಉದ್ದೇಶದಿಂದ ನನ್ನ ಪದ್ಯ ಬೋಧನೆಗೆ ಹಿಂದಿನ ಸಮಿತಿಗೆ ನೀಡಿದ್ದ ಅನುಮತಿಯನ್ನು ಹಿಂಪಡೆದು, ಈ ಕುರಿತು ಕಳೆದ ಮೇ 31 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ ವಿವರವಾದ ಪತ್ರ ಬರೆದಿದ್ದೆ ಎಂದು ನೆನಪಿಸಿದ್ದಾರೆ.

ಈ ಸಂಬಂಧ ಸಾರ್ವಜನಿಕರಿಂದ ನಡೆದ ಅನೇಕ ಬಗೆಯ ತೀವ್ರ ಪ್ರತಿರೋಧಗಳನ್ನು ನಿರ್ಲಕ್ಷಿಸಿದ ಸರ್ಕಾರ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದಲಾದರೂ ದೋಷಪೂರಿತ ಪಠ್ಯಪುಸ್ತಕಗಳನ್ನು ಹಿಂಪಡೆಯದೇ ಮುಂದುವರಿಸಿರುವುದು ಅಕ್ಷಮ್ಯ. ನನ್ನ ಪದ್ಯ ಬಳಕೆಗೆ ಅನುಮತಿ ಬಯಸಿ ಕಳೆದ ಆಗಸ್ಟ್ 16 ರಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಂದ ಪತ್ರ ಬಂದಾಗಲೂ ಅನುಮತಿಯನ್ನು ಖಡಾಖಂಡಿತವಾಗಿ ನಿರಾಕರಿಸಿ ಆಗಸ್ಟ್ 26 ರಂದು ಮರುಪತ್ರ ಬರೆದಿದ್ದೆ ಎಂದು ತಿಳಿಸಿದ್ದಾರೆ.

ನನ್ನಂತೆಯೇ ಹಲವು ಲೇಖಕರು ಪುನರ್ ಪರಿಶೀಲನಾ ಸಮಿತಿಯ ನಡೆಯನ್ನು ಪ್ರತಿರೋಧಿಸಿ ಪಠ್ಯವನ್ನು ಹಿಂಪಡೆದಿದ್ದನ್ನು, ಮತ್ತೊಮ್ಮೆ ಖಚಿತ ಪಡಿಸಿಕೊಂಡ ಸರ್ಕಾರವು ಅದನ್ನು ಮನ್ನಿಸಿ ಪಠ್ಯಪುಸ್ತಕದಿಂದ ನಮ್ಮ ಪಠ್ಯವನ್ನು ಕೈಬಿಟ್ಟು ಕಳೆದ ಸೆಪ್ಟೆಂಬರ್ 23 ರಂದು ಆದೇಶ ಹೊರಡಿಸಿದ್ದು ಮಾಧ್ಯಮಗಳಿಂದ ತಿಳಿದು ಕೊಂಚ ಸಮಾಧಾನವಾಗಿತ್ತು. ಆದರೆ ಲೇಖಕರ ಆಗ್ರಹದಂತೆ ಕೈ ಬಿಟ್ಟಿದ್ದ ಪಠ್ಯಗಳನ್ನು, ಅವರ ಅನುಮತಿ ಇಲ್ಲದೇ ಮರು ಸೇರ್ಪಡೆ ಮಾಡಿಕೊಂಡಿರುವುದಾಗಿ ಸರ್ಕಾರ ಕಳೆದ ಅ.28 ರಂದು ಮರು ಆದೇಶ ಹೊರಡಿಸಿರುವುದು ಸರ್ಕಾರದ ಏಕಪಕ್ಷೀಯ ತೀರ್ಮಾನ. ಇದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.