ಜಿಲ್ಲೆ

ಪಟ್ಟಿಯಿಂದ ಬೇಡ ಜಂಗಮ ಕೈಬಿಡಿ

ಅಶೋಕ್ ಕುಮಾರ್ ಎನ್

ಹಗರಿಬೊಮ್ಮನಹಳ್ಳಿ: ಜಾತಿ ಜನಗಣತಿ ಸಮೀಕ್ಷೆಯಲ್ಲಿ ಬೇಡ ಜಂಗಮರು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುತ್ತಿದ್ದು, ಕೂಡಲೇ ಅವರನ್ನು ಪರಿಶಿಷ್ಟ ಜಾತಿಪಟ್ಟಿಯಿಂದ ತೆಗೆಯಬೇಕು ಎಂದು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯ ವಿಜಯನಗರ ಜಿಲಾಧ್ಯಕ್ಷ ಬ್ಯಾಲಾಳು ಮಂಜುನಾಥ ಒತ್ತಾಯಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಬುಧವಾರ ಮಾತನಾಡಿದರು. ರಾಜ್ಯದಲ್ಲಿ ಬೇಡ ಜಂಗಮ ಸಮುದಾಯವಿಲ್ಲ. ಇದರಿಂದಾಗಿ ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡ ಜಂಗಮರನ್ನು ತೆಗೆದು ಹಾಕಬೇಕು. ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿಯ ಮೂಲ ಸಮುದಾಯಗಳಿಗೆ ಅನ್ಯಾಯವಾಗಬಾರದು ಎಂದು ಆಗ್ರಹಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ವಿಜಯನಗರ ಜಿಲ್ಲಾ ಸದಸ್ಯ ಪರಶುರಾಮ ಹೆಗ್ಡಾಳ್ ಮಾತನಾಡಿ, ಬೇಡ ಜಂಗಮ ಎಂದು ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವವರ ಮಾಹಿತಿ ಪಡೆದು ಅವರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕು. ವೀರಶೈವ ಜಂಗಮರು ಬೇರೆ, ಮಾಂಸ ಸೇವನೆ ಮಾಡುತ್ತಿದ್ದ ಬೇಡ ಜಂಗಮರೇ ಬೇರೆ ಎಂದರು.

ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ ಕಲ್ಲಳ್ಳಿ, ಯುವ ಘಟಕದ ಅಧ್ಯಕ್ಷ ಟಿ.ಅರ್ಜುನ, ಪ್ರಮುಖರಾದ ಆನಂದ ದೇವನಹಳ್ಳಿ ಎಚ್.ಪ್ರಭಾಕರ, ಮೇಘರಾಜ ಒಂಟಿ, ಕೋಗಳಿ ಮಲ್ಲೇಶ್, ದಶಮಾಪುರ ಮರಿಯಪ್ಪ, ರಮೇಶ್ ಪೂಜಾರ್, ಚಿಂತ್ರಪಳ್ಳಿ ರಮೇಶ, ಕಿತ್ನೂರು ದುರುಗಪ್ಪ, ಕಡಲಬಾಳು ಪಕ್ಕೀರಪ್ಪ, ಬ್ಯಾಲಾಳು ಲಕ್ಷ್ಮಪ್ಪ, ಬೆಣಕಲ್ ಪ್ರತಾಪ್, ಚಿಲುಗೋಡಿನ ಮಂಜುನಾಥ, ಮೈಲಪ್ಪ, ಎಚ್.ಗೋಣೆಪ್ಪ, ಮದ್ದಾನಸ್ವಾಮಿ, ಎಚ್.ರಮೇಶ ಮಾದೂರು, ಬಲ್ಲಾಹುಣಸಿ ಹನುಮಂತಪ್ಪ, ಮೈಲಪ್ಪ ಕೋಗಳಿ, ಕೋಟೆಪ್ಪ ದೂಪದಹಳ್ಳಿ, ಸಂತೋಷ್ ಕುಮಾರ್, ಎಚ್.ಮಾರುತಿ, ಎಚ್.ದುರುಗಪ್ಪ ಇದ್ದರು.