ಜಿಲ್ಲೆ

ಪಟ್ಟಾ ನೀಡಿದರೂ ಒಕ್ಕಲೆಬ್ಬಿಸುವುದು ಸಲ್ಲ

ಸಂಡೂರು: ವಿಠಲಾಪುರ ಅರಣ್ಯ ಪ್ರದೇಶದಲ್ಲಿ 1968ಕ್ಕಿಂತ ಮುಂಚಿನಿಂದಲೂ ಸಾಗುವಳಿ ಮಾಡುತ್ತಾ ಬಂದಿದ್ದೇವೆ. ಇದೀಗ ಅರಣ್ಯ ಇಲಾಖೆಯವರು ಬಂದು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಸ್ಥಳಿಯ ದಲಿತ ಮುಖಂಡ ವಿ.ಎ.ಚೌಡಪ್ಪ ಹೇಳಿದರು.

ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆ ಕ್ರಮ ವಿರೋಧಿಸಿ ವಿಠಲಾಪುರ ಅರಣ್ಯ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾನುವಾರ ಮಾತನಾಡಿದರು. ತಲತಲಾಂತರದಿಂದ ಅರಣ್ಯ ಭೂಮಿ ಸಾಗುವಳಿ ಮಾಡುತ್ತಾ ಬಂದಿದ್ದು, ಕೆಲವರಿಗೆ ಪಟ್ಟಾ ಕೊಟ್ಟಿದ್ದಾರೆ. ಕೆಲವರಿಗೆ ಪಟ್ಟಾ ಕೊಟ್ಟಿಲ್ಲ. 208 ಎಕರೆ ಪೈಕಿ 97ಎಕರೆ ಮೀಸಲು ಅರಣ್ಯ ಇದ್ದು, ಇನ್ನುಳಿದ ಭೂಮಿ ಸರ್ಕಾರಿ ಹಳ್ಳ, ದಾರಿ, ಪರಂಪೋಕು ಎಂದಿದೆ. ಪಟ್ಟಾ ಭೂಮಿ ಹೊಂದಿದವರಿಗೂ ಸಾಗುವಳಿ ಮಾಡಲು ಬಿಡುತ್ತಿಲ್ಲ. ಬ್ಯಾಂಕಿನಲ್ಲಿ ಸಾಲವನ್ನು ಸಹ ತೆಗೆದುಕೊಂಡಿದ್ದೇವೆ. ಈಗ ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಆರ್‌ಎಫ್‌ಒ ಪ್ರಾಣೇಶ್ ಮಾತನಾಡಿ, ನಮಗೆ ಒಂದೆರೆಡು ದಿನ ಕಾಲಾವಕಾಶ ಕೊಡಿ ಮೇಲಧಿಕಾರಿಗಳೊಂದಿಗೆ ಮಾತನಾಡಿ ಪಟ್ಟಾ ಇರುವ ಭೂಮಿಗಳಿಗೆ ಸಾಗುವಳಿ ಮಾಡಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.

ದಲಿತ ಸಂಘರ್ಷ ಸಮಿತಿ ಮಾಜಿ ಸಂಚಾಲಕ ರಾಮಕೃಷ್ಣ ಹೆಗಡೆ ಮಾತನಾಡಿ, ರೈತರನ್ನು ಒಕ್ಕಲೆಬ್ಬಿಸಬಾರದು. ಒಂದು ವೇಳೆ ಒಕ್ಕಲೆಬ್ಬಿಸಿದರೆ ತಾಲೂಕು ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದರು.