ಮೈಸೂರು: ಪಟ್ಟಭದ್ರ ಹಿತಾಸಕ್ತಿಗಳ ಲಾಬಿಯಿಂದ ಚಾಮರಾಜದಲ್ಲಿ ಕಾಂಗ್ರೆಸ್ ಗೆಲುವಾಗಿದೆ ಎಂದು ಪರಾಜಿತ ಅಭ್ಯರ್ಥಿ ಬಿಜೆಪಿಯ ಮಾಜಿ ಶಾಸಕ ಎಲ್.ನಾಗೇಂದ್ರ ಆರೋಪ ಮಾಡಿದರು.
ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದರೂ ಮತದಾರರು ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ನೀಡಲಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಕಳೆದ ಚುನಾವಣೆಯಲ್ಲಿ ನನಗೆ ಸುಮಾರು 51 ಸಾವಿರ ಮತ ಬಂದಿತ್ತು. ಆದರೆ ಈ ಬಾರಿ 68 ಸಾವಿರ ಮತಗಳು ಬಂದಿದ್ದರೂ ಸೋಲಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್‌ನ ನಗರಪಾಲಿಕೆ ಸದಸ್ಯರು ಇದ್ದರೂ ಅವರ ಅಭ್ಯರ್ಥಿ ಹೆಚ್ಚು ಮತ ಪಡೆಯಲು ಸಾಧ್ಯವಾಗಿಲ್ಲ. ಆ ಮತಗಳು ಎಲ್ಲಿ ಹೋಗಿವೆ ಎನ್ನುವುದೇ ಅನುಮಾನವಾಗಿದೆ ಎಂದರು.
ಕಾಂಗ್ರೆಸ್‌ನ ಅನೇಕ ಭಾಗ್ಯಗಳು ಜನರಲ್ಲಿ ಭರವಸೆ ಹುಟ್ಟಿಸಿವೆ. ವಾಸ್ತವದಲ್ಲಿ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿಯೇ ಇದನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.
ಕ್ಷೇತ್ರದಲ್ಲಿ ನನಗೆ ಸೋಲುಂಟಾದರೂ ತಾವು ತಂದ ಅಭಿವೃದ್ಧಿ ಕೆಲಸಗಳನ್ನು ನೂತನ ಶಾಸಕರು ಮುಂದುವರಿಸಲಿ. ನಾನು ಸೋತಿದ್ದರೂ ಪಕ್ಷದ ಕಾರ್ಯಕರ್ತರು ಎದೆಗುಂದಬೇಕಾಗಿಲ್ಲ. ನಾನು ಕ್ಷೇತ್ರದ ಜನತೆ ಸೇವೆಯಲ್ಲಿ ಈಗಲೂ ತೊಡಗಿದ್ದು, ಕಾರ್ಯಕರ್ತರು ಪಕ್ಷ ಸಂಘಟಿಸಬೇಕು ಎಂದು ಕೋರಿದರು.
ಫಲಿತಾಂಶ ಪ್ರಕಟವಾದ ಬಳಿಕ ಹಲವೆಡೆ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿರುವುದು ನಿಲ್ಲಬೇಕು. ಕೇಂದ್ರ ಸರ್ಕಾರ ನಿಷೇಧಿಸಿರುವ ಸಂಘಟನೆಗಳ ಬಗ್ಗೆ ನೂತನ ಸರ್ಕಾರ ಮೃದುಧೋರಣೆ ತಳೆಯಬಾರದು ಎಂದು ಆಗ್ರಹಿಸಿದರು.
ಪಕ್ಷದ ಮುಖಂಡರಾದ ಸೋಮಶೇಖರರಾಜು, ರವೀಂದ್ರ, ವೇದಾವತಿ, ಎಸ್.ಕೆ.ದಿನೇಶ್ ಇದ್ದರು.