ಭಾಲ್ಕಿಯ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಬೀದರ್‌ನ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ವಿಭಾಗದ ಪ್ರವೇಶ ಪ್ರಾರಂಭದ ಕರಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬಿಡುಗಡೆಗೊಳಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಶಶಿಧರ ಕೋಸಂಬೆ, ಸಂಗಮೇಶ ಹುಣಜೆ ಮದಕಟ್ಟಿ, ಮೋಹನ ರೆಡ್ಡಿ, ಬಸವರಾಜ ಮೊಳಕೀರೆ ಇದ್ದರು. 
ಜಿಲ್ಲೆ

ಪಟ್ಟದ್ದೇವರ ಶೈಕ್ಷಣಿಕ ಕಾಳಜಿ ಮಾದರಿ

ರಾಜು ಯಮಕನಮರಡಿ

ಭಾಲ್ಕಿ: ಗಡಿಭಾಗದಲ್ಲಿ ಶೈಕ್ಷಣಿಕ ಪ್ರಗತಿಗೆ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ತೋರುತ್ತಿರುವ ಕಾಳಜಿ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಬೀದರ್‌ನ ಚನ್ನಬಸವೇಶ್ವರ ಗುರುಕುಲ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಪ್ರವೇಶ ಪ್ರಾರಂಭದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಪೂಜ್ಯರು ೧೯೯೨ರಲ್ಲಿ ಪ್ರಾರಂಭಿಸಿದ ಶಿಕ್ಷಣ ಸಂಸ್ಥೆ ಇಂದು ಹೆಮ್ಮೆರವಾಗಿ ಬೆಳೆದು ನಾಡಿಗೆ ಅದ್ಭುತ ಕೊಡುಗೆ ನೀಡುತ್ತಿದೆ. ಚನ್ನಬಸವೇಶ್ವರ ಗುರುಕುಲ ಗುಣಮಟ್ಟದ ಶಿಕ್ಷಣ, ಸಂಸ್ಕಾರದ ಮೂಲಕ ರಾಜ್ಯದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಇದೀಗ ಬೀದರ್ ನಗರದಲ್ಲಿ ಚನ್ನಬಸವೇಶ್ವರ ಗುರುಕುಲ ಹೆಸರಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದ ಕಾಲೇಜು ಆರಂಭಿಸುತ್ತಿರುವುದು ಹೆಮ್ಮೆ ತರಿಸಿದೆ ಎಂದರು.

ಕಾಲೇಜು ಆರಂಭದಿಂದ ಬೀದರ್ ನಗರ ಮತ್ತು ಸುತ್ತಮುತ್ತಲಿನ ಗ್ರಾಮದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಲಿದೆ. ಈ ಸಂಸ್ಥೆಯಡಿ ಇನ್ನಷ್ಟು ಅಂಗಸಂಸ್ಥೆ ಹೊರಬಂದು ಶೈಕ್ಷಣಿಕ ಕ್ಷೇತ್ರ ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ಆಶಿಸಿದರು.

ಸಂಸ್ಥೆಯ ನಿರ್ದೇಶಕ ಶಶಿಧರ ಕೋಸಂಬೆ, ಪ್ರಥಮ ದರ್ಜೆ ಗುತ್ತಿಗೆದಾರ ಸಂಗಮೇಶ ಹುಣಜೆ ಮದಕಟ್ಟಿ, ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪಪ್ರಾಚಾರ್ಯ ಸಿದ್ರಾಮ ಗೊಗ್ಗಾ ಇದ್ದರು. ಲಕ್ಷ್ಮಣ ಮೇತ್ರೆ ನಿರೂಪಿ ಪಣೆ ಮಾಡಿ ವಂದಿಸಿದರು.

೨೬ರಂದು ಬೀದರ್‌ನಲ್ಲಿ ಕಾಲೇಜು ಪ್ರಾರಂಭ: ಬೀದರ್ ನಗರ ಸೇರಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ದಿಸೆಯಿಂದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಚನ್ನಬಸವೇಶ್ವರ ಗುರುಕುಲ ಪ್ರಥಮ ವರ್ಷದ ವಿಜ್ಞಾನ ಪದವಿ ಪೂರ್ವ ಕಾಲೇಜು ಆರಂಭಿಸಲು ನಿರ್ಧರಿಸಿದ್ದಾರೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು. ೨೬ರಂದು ಬೀದರ್‌ನ ರಾಂಪುರೆ ಬ್ಯಾಂಕ್ ಕಾಲನಿಯಲ್ಲಿ ಕಾಲೇಜು ಉದ್ಘಾಟನೆಗೊಳ್ಳಲಿದ್ದು, ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಉದ್ಘಾಟಿಸಲಿದ್ದಾರೆ ಎಂದರು.

ಬೀದರ್‌ನ ರಾಂಪುರೆ ಬ್ಯಾಂಕ್ ಕಾಲನಿಯ ಚನ್ನಬಸವೇಶ್ವರ ಗುರುಕುಲ ಕಾಲೇಜಿನಲ್ಲಿ ಫೆ.೨ ರಂದು ಪಿಯುಸಿ ಪ್ರಥಮ ವರ್ಷದ ಪ್ರವೇಶಕ್ಕಾಗಿ ಸ್ಕಾಲರ ಶೀಪ್ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಬೇಕು.

| ಶ್ರೀ ಗುರುಬಸವ ಪಟ್ಟದ್ದೇವರು, ಹಿರೇಮಠ ಸಂಸ್ಥಾನ ಭಾಲ್ಕಿ

ಗ್ರಾಮೀಣ ಭಾಗದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ತೆರೆದ ವಿದ್ಯಾ ಸಂಸ್ಥೆಯಿಂದ ವಿದ್ಯಾರ್ಥಿಗಳು ಸಾಧಕರಾಗಿ ಹೊರಹೊಮ್ಮುತ್ತಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ನಾಡಿಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ.

| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ ಬೀದರ್