ಕೆಂಭಾವಿ: ಪಟ್ಟಣದ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪುರಸಭೆ ಅಧ್ಯಕ್ಷ ರಹೆಮಾನ್ ಪಟೇಲ್ ಯಲಗೋಡ ಹೇಳಿದರು.
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಗುರುವಾರ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಹಲವು ಸದಸ್ಯರು ಪಟ್ಟಣದ ಸ್ವಚ್ಛತೆ ಬಗ್ಗೆ ಗಂಭೀರವಾಗಿ ಆರೋಪಿಸಿದ್ದ ವೇಳೆ ಅಧ್ಯಕ್ಷರು ಮಾತನಾಡಿ, ಪೌರಕಾರ್ಮಿಕರು ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸುವುದಕ್ಕಾಗಿ ಒಬ್ಬ ಮೇಲ್ವಿಚಾರಕರನ್ನ ನೇಮಕ ಮಾಡಲಾಗುವುದು. ಇದರೊಟ್ಟಿಗೆ ಪಟ್ಟಣದ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಮುಖವಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ನಿರ್ಮಾಣದ ಕಾಮಗಾರಿಗೆ ತಗುಲುವ ಹೆಚ್ಚುವರಿ ವೆಚ್ಚ ರೂ.೮ ಲಕ್ಷಗಳ ಅನುಮೋದನೆ, ೨೦೨೫ರ ಏಪ್ರಿಲ್ ಮತ್ತು ಮೇ ತಿಂಗಳ ಖರ್ಚು ದೃಢೀಕರಿಸುವ ಬಗ್ಗೆ ಮತ್ತು ಹಳೇ ಜೆಸಿಬಿ ದುರಸ್ತಿ ಹಾಗೂ ಹೊಸ ಜೆಸಿಬಿ ಖರೀದಿ ಸೇರಿ ಹಲವು ವಿಷಯಗಳ ಮೇಲೆ ಕಾವೇರಿದ ಚರ್ಚೆ ನಡೆಯಿತು.
ಬೆಳಗ್ಗೆ ೧೧ಕ್ಕೆ ನಿಗದಿಯಾಗಿದ್ದ ಸಭೆ ೧೨.೩೦ರ ನಂತರ ಆರಂಭವಾಗಿ ಪ್ರಮುಖ ವಿಷಯಗಳ ಚರ್ಚೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಮಹ್ಮದ್ ಯುಸೂಫ್, ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿಗೆ ರಾಜ್ಯದ ಎಲ್ಲೆಡೆ ಸ್ಥಳೀಯ ಸಂಸ್ಥೆಗಳಿAದ ನೀಡಿದ ಹೆಚ್ಚುವರಿ ವೆಚ್ಚ ಇರಿಸಲು ಸಭೆ ಒಮ್ಮತದ ನಿರ್ಧಾರ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಈ ಬಗ್ಗೆ ಕೂಲಂಕುಶ ವಿಚಾರಿಸಿ ಪುರಸಭೆಗೆ ಯಾವುದೇ ಆರ್ಥಿಕವಾಗಿ ಹೊರೆಯಾಗದಂತೆ ಕಾಮಗಾರಿಗೆ ಹಣ ನೀಡುವಂತೆ ಸಮ್ಮತಿಸಲಾಯಿತು.
ಸದಸ್ಯ ರವಿ ಸೊನ್ನದ ಮಾತನಾಡಿ, ಪಟ್ಟಣದ ಹಳೇ ಬಸ್ ನಿಲ್ದಾಣದ ಪ್ರದೇಶದ ಬಸವೇಶ್ವರ ವೃತ್ತದಲ್ಲಿ ಬಸವಣ್ಣನ ಮೂರ್ತಿ ಸ್ಥಾಪನೆಗೆ ಬಸವೇಶ್ವರ ಪತ್ತಿನ ಸಹಕಾರ ಸಂಘ ಹಣ ನೀಡಲು ಮುಂದೆ ಬಂದಿದ್ದು, ಸೂಕ್ತ ಜಾಗ ಗುರುತು ಮಾಡುವಂತೆ ಮನವಿ ಮಾಡಿದರು.
ಪುರಸಭೆಯಲ್ಲಿ ಸ್ವಚ್ಛತೆ ಎನ್ನುವುದು ನೆಪಮಾತ್ರಕ್ಕಿದ್ದು, ಪಟ್ಟಣದ ಹಲವು ಬಡಾವಣೆಗಳಲ್ಲಿ ಚರಂಡಿ ಹಾಗೂ ರಸ್ತೆಗಳು ಸಂಪೂರ್ಣ ಮಲೀನವಾಗಿದ್ದು ಸ್ವಚ್ಛತೆ ನಿಯಂತ್ರಣ ಮಾಡುವಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ನೇರ ಆರೋಪಿಸಿದರು.
ಇನ್ನೋರ್ವ ಸದಸ್ಯ ರಾಘವೇಂದ್ರ ಮಾತನಡಿ, ಸ್ವಚ್ಛಗೊಳಿಸುವ ವಾಹನಗಳು ರಾತ್ರಿಯಾಗುತ್ತಿದ್ದಂತೆ ತಿರುಗಾಟ ನಡೆಸುತ್ತಿದ್ದು, ಸಿಬ್ಬಂದಿ ತಮ್ಮ ವೈಯಕ್ತಿಕ ಕೆಲಸಗಳಿಗೆ ವಾಹನ ಬಳಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ಒಟ್ಟಾರೆ ಪಟ್ಣದ ಸ್ವಚ್ಛತೆ ಮತ್ತು ವಾಹನಗಳ ನಿರ್ವಹಣೆ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷದ ಹಲವು ಸದಸ್ಯರು ತಮ್ಮ ಅಸಮಾಧಾನ ಹೊರಗೆ ಹಾಕಿದರು. ಸದಸ್ಯರಾದ ಮಲ್ಲಿನಾಥಗೌಡ ಪೊಲೀಸ್ ಪಾಟೀಲ್, ಚಳಿಗೆಪ್ಪ, ಶರಣಪ್ಪ ಅಂಗಡಿ, ನಾನಾಗೌಡ ಪಾಟೀಲ್ ಮಾತನಾಡಿದರು.
ನಂತರ ಪುರಸಭೆಗೆ ವಿವಿಧ ಮೂಲಗಳಿಂದ ಬಂದ ಹಣ, ಖರ್ಚು, ಉಳಿದ ಒಟ್ಟು ಹಣದ ಬಗ್ಗೆ ಸಭೆಯಲ್ಲಿ ಓದಿ ಹೇಳಲಾಯಿತು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಸದಸ್ಯರಾದ ಶ್ರೀಧರ ದೇಶಪಾಂಡೆ, ರಮ್ಯಾ ದೇಶಪಾಂಡೆ, ಆರೀಫ್ ಖಾಜಿ, ರಾಮಕೃಷ್ಣ, ಶಾರದಾ ಬಿರಾದಾರ, ಸುಧಾಕರ ಡಿಗ್ಗಾವಿ, ನಾಮನಿರ್ದೇಶಿತ ಸದಸ್ಯರಾದ ಪರಶುರಾಮ ಬಳಬಟ್ಟಿ, ಶಂಕರ ಖಾನಾಪುರ, ದೇವೇಂದ್ರಪ್ಪ ಟಣಕೆದಾರ ಸೇರಿ ಹಲವರಿದ್ದರು. ಸಿದ್ರಾಮಯ್ಯ ಇಂಡಿ ಸ್ವಾಗತಿಸಿದರು.