ಹಿರೀಸಾವೆ: ಯಾವುದೇ ನಗರ, ಪಟ್ಟಣ ಸ್ವಚ್ಛತೆಯೊಂದಿಗೆ ಆರೋಗ್ಯ ಹಾಗೂ ಸುಂದರವಾಗಿರಲು ತ್ಯಾಜ್ಯ ವಿಲೇವಾರಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಈ.ಬೋರಣ್ಣ ಹೇಳಿದರು.
ಪಟ್ಟಣದ ಗ್ರಾಮ ಪಂಚಾಯಿತಿ ಆವರಣದಲ್ಲಿ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಹಿರೀಸಾವೆ ಪಟ್ಟಣವನ್ನು ಸ್ವಚ್ಛತೆಯಿಂದ ಕಾಪಾಡಲು ನಿವಾಸಿಗಳು ಸಹಕಾರ ನೀಡಬೇಕು. ಅಗತ್ಯ ಸ್ಥಳ ಇಲ್ಲದಿದ್ದರಿಂದ 3 ವರ್ಷಗಳಿಂದ ಕಸ ವಿಲೇವಾರಿ ಸಮಸ್ಯೆ ಎದುರಾಗಿತ್ತು. ಸದ್ಯ ಪಟ್ಟಣದ ಹೊರ ವಲಯದಲ್ಲಿ ಸೂಕ್ತ ಜಾಗ ಗುರುತಿಸಲಾಗಿದೆ. ಪ್ರತಿದಿನ ವಾಹನಗಳು ಎಲ್ಲ ವಾರ್ಡ್ ಹಾಗೂ ಬೀದಿಗಳಿಗೆ ಆಗಮಿಸಿ ತ್ಯಾಜ್ಯ ಸಂಗ್ರಹಿಸಲಿವೆ ಎಂದು ಹೇಳಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಅವರು ಸಾಕಷ್ಟು ಅನುದಾನ, ಯೋಜನೆಗಳನ್ನು ಕಲ್ಪಿಸಿದ್ದು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಾಣ, ಕುಡಿಯುವ ನೀರು ಹಾಗೂ ಬೀದಿ ದೀಪಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಜೆ.ಮಹೇಶ್, ಸದಸ್ಯ ಚೇತನ್, ಮುಖಂಡರಾದ ರವಿಕುಮಾರ್, ಬೋರೇಗೌಡ, ಹೊನ್ನೇನಹಳ್ಳಿ ಬಾಬು, ವೆಂಕಟೇಶ್ ಇತರರು ಇದ್ದರು.