ಜಿಲ್ಲೆ

ಪಟಾಕಿ ಸಿಡಿದು 11 ಜನರ ಕಣ್ಣಿಗೆ ಗಾಯ

ಮೈಸೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡಗಳು ವರದಿಯಾಗಿದ್ದು, ನಗರದಲ್ಲಿ 11 ಜನರ ಕಣ್ಣಿಗೆ ಗಾಯವಾಗಿದೆ.

ಈ ಪೈಕಿ ಆರು ಜನರಿಗೆ ಗಂಭೀರವಾಗಿ ಗಾಯವಾಗಿದೆ. ಉಳಿದವರ ಕಣ್ಣಿಗೆ ಸಣ್ಣ ಪುಟ್ಟ ಹಾನಿಯಾಗಿದೆ.

ಬುಧವಾರ ಪಟಾಕಿ ಸಿಡಿಸುವ ಮೂಲಕ ದೀಪಾವಳಿಯನ್ನು ನಗರದ ವಿವಿಧೆಡೆ ಸಡಗರದಿಂದ ಆಚರಿಸಲಾಗಿದೆ. ಪಟಾಕಿ ಕೆಲವರ ಜೀವನದ ನೆಮ್ಮದಿಯನ್ನು ಹಾಳು ಮಾಡಿದೆ.

ಹಬ್ಬದ ಹಿನ್ನೆಲೆಯಲ್ಲಿ ಪಟಾಕಿಯಿಂದ ಗಾಯಗೊಳ್ಳುವವರ ಚಿಕಿತ್ಸೆ ನೀಡಲು ಕೆ.ಆರ್.ಆಸ್ಪತ್ರೆಯ ಕಣ್ಣಿನ ವಿಭಾಗದಲ್ಲಿ ವಿಶೇಷ ಚಿಕಿತ್ಸಾ ಘಟಕವನ್ನು ತೆರೆಯಲಾಗಿದೆ.

ಗಾಯಗೊಂಡಿರುವ 11 ಜನರಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರೊಂದಿಗೆ ಸಾಕಷ್ಟು ಜನರಿಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.