ಹಾಸನ: ದೀಪಾವಳಿ ಹಬ್ಬ ಆಚರಣೆ ಸಂಬಂದ ಪಟಾಕಿ ಮಾರಾಟ ಮಾಡುವ ಸಂದರ್ಭದಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಎಚ್ಚರವಹಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪಟಾಕಿ ಮಾರಾಟಕ್ಕೆ ತಾತ್ಕಾಲಿಕವಾಗಿ ಪರವಾಗಿ ನೀಡುವ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹೊಸದಾಗಿ ಪಟಾಕಿ ಮಾರಾಟ ಮಳಿಗೆ ತೆರೆಯುವವರು ಸೆ.25 ರವರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರಲ್ಲದೆ, ಮಾರಾಟಗಾರರು ಕಡ್ಡಾಯವಾಗಿ ತರಬೇತಿ ಪಡೆದುಕೊಳ್ಳುವಂತೆ ಸೂಚಿಸಿದರು.
ನಿಗದಿತ ಸ್ಥಳ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಪಟಾಕಿ ಮಾರಾಟ ಮಾಡಲು ಅವಕಾಶವಿರುವುದಿಲ್ಲ, ಪಟಾಕಿ ಮಾರಾಟ ಸ್ಥಳದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಬ್ಬದ ಸಂಭ್ರಮ ಸಡಗರ ಆಚರಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಪಟಾಕಿ ಮಾರಾಟ ಮಾಡುವಂತೆ ತಿಳಿಸಿದರು.
ಕಳೆದ ಬಾರಿಯಂತೆ ನಗರದ ಕೆ.ಎಸ್.ಆರ್.ಟಿ.ಸಿ. ಹೊಸ ಬಸ್ ನಿಲ್ದಾಣದ ಎದುರುಗಡೆ ಇರುವ ಖಾಲಿ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡಲು ಸ್ಥಳ ನಿಗದಿ ಮಾಡಿದ್ದು, ಹಾಲಿ ಇದು ವರೆವಿಗೂ ಪಟಾಕಿ ಮಾರಾಟ ಮಾಡಲು ಅನುಮತಿ ಕೋರಿ 56 ಅರ್ಜಿಗಳು ಸ್ವೀಕೃತವಾಗಿರುತ್ತವೆ ಎಂದರು.
ಪಟಾಕಿ ಮಾರಾಟ ಮಾಡುವ ಪ್ರದೇಶದ ಸುತ್ತ ನಾಗರೀಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ತಿಳಿಸಿದರು. ಪ್ರತಿ ವರ್ಷದ ರೀತಿ ನಗರ ಹೊರತುಪಡಿಸಿ. ಹಾಸನ ಉಪವಿಭಾಗಾಧಿಕಾರಿಗಳು ತಾಲೂಕಿನ ಗ್ರಾಮಾಂತರ ಪ್ರದೇಶಕ್ಕೆ ಹಾಗೂ ಸಕಲೇಶಪುರ ಉಪವಿಭಾಗಾಧಿಕಾರಿಗಳು ಸಕಲೇಶಪುರ ಪಟ್ಟಣ
ಮತ್ತು ಗ್ರಾಮಾಂತರ ಪ್ರದೇಶಕ್ಕೆ ಉಳಿದ ತಾಲೂಕು ತಹಸೀಲ್ದಾರರುಗಳು ಪಟಾಕಿ ಮಾರಾಟದ ತಾತ್ಕಾಲಿಕ ಪರವಾನಗಿಯನ್ನು ನೀಡುವುದು. ಸುರಕ್ಷತಾ ಕ್ರಮದ ಕುರಿತು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಪಟಾಕಿ ಮಾರಾಟದ ತಾತ್ಕಾಲಿಕ ಪರವಾನಗಿಯನ್ನು ನೀಡುವ ಕುರಿತು ಸಂಬಂಧಿಸಿದ ಇಲಾಖೆಗಳು ಶೀಘ್ರವಾಗಿ ನಿರಾಕ್ಷೇಪಣಾ ಪತ್ರದೊಂದಿಗೆ ಪಟಾಕಿ ಮಾರಾಟದ ಸ್ಥಳದ ನೀಲಿನಕ್ಷೆಯನ್ನು ನೀಡಬೇಕು. ಮಾರಾಟಗಾರರು ಎ.ಬಿ.ಸಿ. ಫೌಡರ್ ನಿರ್ವಹಣೆ ಬಗ್ಗೆ ಅಂಗಡಿ ಮಳಿಗೆ ತೆರೆಯುವ ಮುಂಚೆ ಕಡ್ಡಾಯವಾಗಿ ತರಬೇತಿ ಪಡೆಯಬೇಕು. ಪ್ರತಿ ಮಳಿಗೆಗೆ ಪ್ರತಿ ದಿನ 500/- ರೂಗಳ ದಿನ ಬಾಡಿಗೆ ಶುಲ್ಕವನ್ನು ವಿಧಿಸಲು ತೀರ್ಮಾನಿಸಲಾಯಿತು. ಬಾಡಿಗೆ ಹಣವನ್ನು ಸಂಬಂಧಿಸಿದ ಅಂಗಡಿ ಮಾಲೀಕರು ಆಯುಕ್ತರು ನಗರಸಭೆ ರವರಿಗೆ ಪಾವತಿಸಲು ಸೂಚಿಸಲಾಯಿತು.
ತಾತ್ಕಾಲಿಕ ಪಟಾಕಿ ಮಾರಾಟ ಪರವಾನಗಿಯು ಕೇವಲ ನಿರ್ಧಿಷ್ಟಪಡಿಸಿದ ಅವಧಿಯವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಸದರಿ ಪರವಾನಗಿಯು ಕೇವಲ ಪಟಾಕಿ ಮಾರಾಟ ಮಾಡುವ ಸಲುವಾಗಿ ನೀಡಲಿದ್ದು, ಯಾವುದೇ ರೀತಿಯ ಪಟಾಕಿಗಳನ್ನು ತಯಾರಿಸುವಂತಿಲ್ಲ ಮತ್ತು ಅವಧಿ ನಂತರ ಮಾರಾಟ ಮತ್ತು ಶೇಖರಣಿ ಮಾಡುವಂತಿಲ್ಲ. ಪಟಾಕಿ ಅಂಗಡಿಗಳನ್ನು ನಿಗದಿತ ಸ್ಥಳ ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಲ್ಲಿ ತೆರೆಯುವಂತಿಲ್ಲ. ಒಂದು ವೇಳೆ ನಿಗಧಿಪಡಿಸಿದ ಸ್ಥಳವನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಪಟಾಕಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾತ್ಕಾಲಿಕ ಪಟಾಕಿ ಮಳಿಗೆಗಳು ಎರಡು ಕಡೆಗಳಲ್ಲಿ ಸರಾಗವಾಗಿ ಗಾಳಿಯಾಡುವಂತಿರಬೇಕು ಮತ್ತು ಪ್ರತಿ ಅಂಗಡಿಗಳ ಮಧ್ಯೆ ಕನಿಷ್ಠ 3 ಮೀಟರ್ ಅಂತರ ಖಾಲಿ ಬಿಡತಕ್ಕದ್ದು ಹಾಗೂ ವಿದ್ಯುತ್ ಸಂಪರ್ಕವನ್ನು ಸುಸಜ್ಜಿತವಾಗಿ ಮಾಡುವಂತೆ ತಿಳಿಸಿದರಲ್ಲದೆ ತಾತ್ಕಾಲಿಕ ಮಳಿಗೆ ನಿರ್ಮಿಸಲು ಬೆಂಕಿಯನ್ನು ತಡೆಗಟ್ಟಬಹುದಾದ, ಬೆಂಕಿ ಹೊತ್ತಿಕೊಳ್ಳದ ಸಾಧನಗಳನ್ನು ಕಡ್ಡಾಯವಾಗಿ ಉಪಯೋಗಿಸುವಂತೆ ತಿಳಿಸಿದರು.
ಮಳಿಗೆಗಳಲ್ಲಿ ಮತ್ತು ಮಳಿಗೆಗಳಿಂದ 50 ಮೀಟರ್ ದೂರದವರೆಗೆ ಧೂಮಪಾನ ಅಥವಾ ಕುಕ್ಕಿಂಗ್ ವ್ಯವಸ್ಥೆ ನಿಷೇಧ ಮಾಡಲಾಗಿದೆ. ಮಳಿಗೆಗಳ ಸುತ್ತ ಧೂಮಪಾನ ಮಾಡುವುದು, ಕಿಡಿಹೊತ್ತಿಸುವುದು ಮತ್ತು ಪಟಾಕಿ ಸಿಡಿಸುವುದನ್ನು ನಿಷಿದ್ಧಗೊಳಿಸಿರುವ ಸಂಬಂಧ ಸೂಚನಾ ಫಲಕ ಹಾಕಿರತಕ್ಕದ್ದು.
ಪಟಾಕಿ ಮಾರಾಟದ ಮಳಿಗೆಗಳಲ್ಲಿ ಕಳ್ಳತನ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮಳಿಗೆಗಳ ರಕ್ಷಣೆಗೆ ಆರಕ್ಷಕ ಇಲಾಖಾ ವತಿಯಿಂದ ಸಿಬ್ಬಂದಿಯನ್ನು ನಿಯೋಜಿಸುವಂತೆ ತಿಳಿಸಿದವರಲ್ಲದೆ, ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆಗಳಲ್ಲಿ ರಾತ್ರಿ ಯಾರು ಮಲಗಬಾರದು ಹಾಗೂ ಆಪ್ರಾಪ್ತ ವಯಸ್ಸಿನ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದು ಎಂದು ತಿಳಿಸಿದರು.
ತಾತ್ಕಾಲಿಕ ಅಂಗಡಿ ನಿರ್ಮಿಸಿದ ದಿನಾಂಕದಿಂದ ಅಂಗಡಿ ಮುಚ್ಚುವವರೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಅಗ್ನಿಶಾಮಕ ದಳ ಇಲಾಖೆಯ ಸುಸಚ್ಛತ ಫೈರ್ ಇಂಜಿನ್ ಸ್ಥಳದಲ್ಲಿ ನಿಲುಗಡೆ ಆಗಿರುವಂತೆ ಕ್ರಮವಹಿಸಲು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಅವರು ಮಾತನಾಡಿ ಪಟಾಕಿ ಮಾರಾಟ ಸ್ಥಳದಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಸಿ.ಟಿ.ವಿ. ಅಳವಡಿಸುವಂತೆ ತಿಳಿಸಿದರು.
ಸಭೆಯಲ್ಲಿ ಅಪಾರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ,ಹಾಸನ ಉಪವಿಭಾಗಾಧಿಕಾರಿ ಮಾರುತಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಪಟಾಕಿ ವರ್ತಕರ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಮಾರಾಟಗಾರರು ಸಭೆಯಲ್ಲಿ ಹಾಜರಿದ್ದರು.