ಜಿಲ್ಲೆ

ಪಟಾಕಿ ದುರಂತ ತಡೆಗೆ ಕಣ್ಗಾವಲು

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಆನೇಕಲ್ ತಾಲೂಕು ಅತ್ತಿಬೆಲೆಯಲ್ಲಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ 17 ಮಂದಿ ಸಜೀವ ದಹನವಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಲ್ಲಾಡಳಿತ ಈ ಬಾರಿ ಪಟಾಕಿ ಮಾರಾಟ ದಾಸ್ತಾನು ಕಡೆಗಳಲ್ಲಿ ಕಣ್ಗಾವಲು ಇಡಲಿದೆ.

ಈಗಾಗಲೇ ಆಯಾ ತಾಲೂಕಿನ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿರುವ ಜಿಲ್ಲಾಧಿಕಾರಿ ಪಟಾಕಿ ದುರಂತಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ. ಅಕ್ರಮ ಪಟಾಕಿ ದಾಸ್ತಾನು ಹಾಗೂ ಮಾರಾಟದ ವಿರುದ್ಧ ಸಮರ ಸಾರಿರುವ ಜಿಲ್ಲಾಡಳಿತದ ಹಲವು ನಿಯಮಗಳನ್ನು ರೂಪಿಸಿದ್ದು ನಿಯಮ ಉಲ್ಲಂಸಿದರೆ ಕಠಿಣ ಕ್ರಮದ ಎಚ್ಚರಿಕೆ ರವಾನಿಸಿದೆ.

ಸಮಿತಿ ರಚನೆ: ಈ ಬಾರಿ ಜಿಲ್ಲೆಯಲ್ಲಿ ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ನಿಬಂಧನೆಗಳನ್ನು ಹೇರಿದೆ, ಪಟಾಕಿ ಮಳಿಗೆ ತೆರೆಯಲು ತಾಲೂಕು ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂಬ ನಿಬಂಧನೆ ವಿಧಿಸಿದೆ. ನಿಯಮ ಪಾಲಿಸಿದರಷ್ಟೇ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರೂಪಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ರವಾನಿಸಿದೆ. ಸಮಿತಿಗಳಲ್ಲಿ ಆಯಾ ತಾಲೂಕು ತಹಸೀಲ್ದಾರ್, ಆರಕ್ಷಕ ನಿರೀಕ್ಷಕರು, ತಾಪಂ ಇಒ, ಪೌರಾಯುಕ್ತರು, ಅಗ್ನಿಶಾಮಕ ಅಧಿಕಾರಿ, ಬೆಸ್ಕಾಂ ಅಧಿಕಾರಿ, ಪರಿಸರ ಅಧಿಕಾರಿಗಳಿದ್ದು ಜಂಟಿಯಾಗಿ ಪರಿಶೀಲಿಸಿದ ನಂತರವೇ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಿಗೆ ಸಿಗಲಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಹಣತೆಗಳ ಹಬ್ಬ ಆಚರಿಸೋಣ: ದೀಪಾವಳಿ ಹಬ್ಬ ಸಮೀಪಿಸುತ್ತಿರುವುದರಿಂದ ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಹಾಗೂ ಶಬ್ಧ ಮಾಲಿನ್ಯ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಮಾರಾಟ ಮಾಡುವುದು ಮತ್ತು ಅಂಥ ಪಟಾಕಿಗಳನ್ನು ಬಳಸುವುದು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ದೀಪಾವಳಿ ಹಬ್ಬವನ್ನು ಹಣತೆಗಳ ಮೂಲಕ ಸಂಭ್ರಮದಿಂದ ಆಚರಿಸೋಣ ಎಂದು ಕರೆ ನೀಡುವ ಮೂಲಕ ಸಾರ್ವಜನಿಕರು ಹೆಚ್ಚು ಶಬ್ಧ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಉಪಯೋಗಿಸಬಾರದೆಂದು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ.

ರಾತ್ರಿ 10ರ ಬಳಿಕ ನಿಷೇಧ: ದೀಪಾವಳಿ ಹಬ್ಬದ ದಿನದಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ವರೆಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ನಿಶ್ಯಬ್ಧ ವಲಯಗಳೆಂದು ಘೋಷಿಸಲ್ಪಟ್ಟಿರುವ (ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ ಇತ್ಯಾದಿಗಳು) ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಯಾವುದೇ ಶಬ್ಧ ಮಾಡುವ ನಿಷೇಧಿತ ಪಟಾಕಿಗಳನ್ನು ಬಳಸಬಾರದು ಎಂದು ಸೂಚಿಸಿದ್ದಾರೆ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಪಟಾಕಿ ಮಾರಾಟದ ಪರವಾನಿ ಪಡೆದಿರುವ ಮಾಲೀಕರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಖುದ್ಧು ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳಬೇಕು ಹಾಗೆಯೇ ಸಾರ್ವಜನಿಕರು ಪಟಾಕಿ ಖರೀಸುವಾಗ ಹಸಿರು ಪಟಾಕಿಗಳನ್ನು ಖಚಿತಪಡಿಸಿಕೊಳ್ಳಬೇಕು ಈ ಮೂಲಕ ಪರಿಸರ ಮಾಲಿನ್ಯ ತಡೆಯ ಜತೆಗೆ ನಿಯಮ ಪಾಲನೆಗೂ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಪರವಾನಗಿ ಕಡ್ಡಾಯ: ಪಟಾಕಿ ಮಾರಾಟ ಮಾಡಲಿರುವ ವ್ಯಾಪಾರಿಗಳು ತಾತ್ಕಾಲಿಕ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಪರವಾನಗಿ ಪಡೆಯಬೇಕಾದರೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಬೇಕು, ಅಗತ್ಯ ದಾಖಲೆಗಳೊಂದಿಗೆ ತಹಸೀಲ್ದಾರ್ ನೇತೃತ್ವದಲ್ಲಿ ವರದಿ ಸಲ್ಲಿಸಲು ಸಮಿತಿ ರಚನೆ ಮಾಡಲಾಗಿದೆ. ಎಲ್ಲ ನಿಯಮಗಳನ್ನು ಪಾಲಿಸಿದರಷ್ಟೇ ಪಟಾಕಿ ಮಾರಾಟಕ್ಕೆ ಅನುಮತಿ ದೊರೆಯಲಿದೆ ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.

ಪಟಾಕಿ ದುರಂತ ತಡೆಗೆ ಹಲವು ನಿಯಮಗಳನ್ನು ರೂಪಿಸಿದ್ದು, ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚಿಸಿ ಕಣ್ಗಾವಲಿಗೆ ಸೂಚಿಸಲಾಗಿದೆ. ಪರಿಸರ ಸ್ನೇಹಿತ ದೀಪಾವಳಿ ಆಚರಣೆಗೆ ಸಾರ್ವಜನಿಕರು ಕೈಜೋಡಿಸಬೇಕು, ಪರಿಸರ ಸ್ನೇಹಿಯಾಗಿ ದೀಪಾವಳಿ ಹಬ್ಬ ಆಚರಿಸಬೇಕು, ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ತರಬೇಕು ಹೊರತು ಯಾವುದೇ ಅನಾಹುತಗಳಿಗೆ ಆಹ್ವಾನ ನೀಡುವಂತಿರಬಾರದು.

ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ